ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಗ್ರಾಮದ ಕೆರೆ ಏರಿಯ ಮೇಲೆ ರೌಡಿಶೀಟರ್ ಒಬ್ಬ ಅನುಮಾನಸ್ಪದವಾಗಿ ಮೃತಪಟ್ಟಿರುವುದು ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ.
ಹಿರೀಸಾವೆ ಸಮೀಪ ಮಾಚಬೂವನಹಳ್ಳಿ ಗ್ರಾಮದ ಕುಮಾರ್(35, ಕಪ್ಪೆ ಕುಮಾರ್) ಮೃತಪಟ್ಟಿರುವ ರೌಡಿಶೀಟರ್.
ಘಟನೆಯ ವಿವರ: ಸೋಮವಾರ ರಾತ್ರಿ ಸುಮಾರಿನಲ್ಲಿ, ಸಂಬಂದಿಕ ಚೇತನ್ ಜತೆ ತಿರುಗಾಡಿಕೊಂಡು ಬರುತ್ತೇನೆ. ಸ್ವಲ್ಪ ತಡವಾಗುತ್ತೆ, ನೀನು ಊಟ ಮಾಡಿ ಮಲಗು ಎಂದು ಕಪ್ಪೆ ಕುಮಾರ್ ತನ್ನ ಪತ್ನಿಗೆ ಹೇಳಿ ಹೊರ ಹೋಗಿದ್ದ ಎನ್ನಲಾಗಿದೆ. ಆದರೆ ಬೆಳಗ್ಗೆ ವೇಳೆಗೆ ಶವವಾಗಿ ಪತ್ತೆಯಾಗಿದ್ದು ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಕಂಡುಬಂದಿವೆ.
ಹಿರೀಸಾವೆ ಗ್ರಾಮದ ಹೊರವಲಯದ ರಸ್ತೆ ಮಧ್ಯೆ ಶವ ಪತ್ತೆಯಾಗಿದ್ದು ಮೃತದೇಹದ ಮೇಲೆ ಯಾವುದೇ ಗಾಯದ ಕಲೆಗಳಿರಲಿಲ್ಲ. ಆದರೂ ಸಾವಿನ ಬಗ್ಗೆ ಅನುಮಾನ ಮೂಡಿದ್ದು ಮೃತದೇಹವನ್ನು ಹಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು.
ಅ.5 ರಂದು ಹಲ್ಲೆ: ಕಳೆದ ಅ.5 ರಂದು ಮಧ್ಯಾಹ್ನ ಸುಮಾರಿನಲ್ಲಿ ಹಿರೀಸಾವೆ ಗ್ರಾಮದ ಪ್ರಕೃತಿ ಬಾರ್ ಮುಂದೆ ನಿಂತಿದ್ದ ವೇಳೆ ಹಳೇ ವೈಷಮ್ಯದ ಹಿನ್ನೆಲೆ ಕಪ್ಪೆ ಕುಮಾರನ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಲಾಂಗ್‌ನಿಂದ ಕುಮಾರನ ಕಾಲಿಗೆ ಹೊಡೆದು ಗಾಯಗೊಳಿಸಲಾಗಿತ್ತು. ನಂತರ ಸ್ಥಳದಿಂದ ಓಡಿ ಹೋಗಿದ್ದ ಕುಮಾರ್ ಆಸ್ಪತೆಗೆ ದಾಖಲಾಗಿ ತನ್ನ ಪ್ರಾಣ ಉಳಿಸಿಕೊಂಡಿದ್ದ.
ಆದರೆ ಈಗ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಕುಮಾರ್ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕಪ್ಪೆ ಕುಮಾರನ ಪತ್ನಿ ಪ್ರಶಾಂತಿ ನೀಡಿದ ದೂರಿನ ಹಿನ್ನೆಲೆ ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೃದಯಾಘಾತದಿಂದ ಸಾವು: ಮರಣೋತ್ತರ ಪರೀಕ್ಷೆಯ ವರದಿ ಲಭ್ಯವಾಗಿದ್ದು ರೌಡಿಶೀಟರ್ ಕುಮಾರ್ ಹೃದಯಾಘಾತದಿಂದ ಮೃತಪಟ್ಟಿರುವುದು ತಿಳಿದುಬಂದಿದೆ. ಸಾವಿನ ಸುತ್ತ ಯಾವುದೇ ಅನುಮಾನವಿಲ್ಲ. ಇದೊಂದು ಸಹಜ ಹಾಗೂ ಸಾಮಾನ್ಯ ಸಾವು ಎಂದು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.