ಜಿಲ್ಲೆ

ರೌಡಿ ಗ್ಯಾಂಗ್ನ ನಾಲ್ವರು ಅಂದರ್

ಕಲಬುರಗಿ: ನಗರದ ರಿಂಗ್ ರೋಡ್ಗೆ ಹೊಂದಿಕೊಂಡಿರುವ ಪೀರ್ ಬಂಗಾಲಿ ಮೈದಾನದಲ್ಲಿ ರೌಡಿಶೀಟರ್ ಚಿಂದಿ ಹಸನ್ನನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಗ್ಯಾಂಗ್ನ ನಾಲ್ವರನ್ನು ಗ್ರಾಮೀಣ ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ ಎಂದು ಕಮೀಷನರ್ ಸತೀಶಕುಮಾರ ತಿಳಿಸಿದ್ದಾರೆ.
ಹಂತಕರಾದ ರೌಡಿ ಶೀಟರ್ಗಳಾದ ಯಾದುಲ್ಲಾ ಕಾಲನಿ ನಿವಾಸಿ ಆಟೋ ಚಾಲಕ ಮಸ್ತಾನ್ ಷಾ ಮಲಂಗ್ ಷಾ (30), ಪರಸಿ ಹಾಕುವ ಕೆಲಸ ಮಾಡುವ ಸಾಧಿಕ್ ಅಬ್ದುಲ್ ರಶೀದ್(22), ಮೆಹಬೂಬ್ ನಗರದ ಮೋಸಿನ್ ಚಾವೂಸ್ ಹಬೀಬ್ ಚಾವೂಸ್(23), ಫಿರ್ದೋಸ್ ಕಾಲನಿಯ ಮೆಕಾನಿಕ್ ಮಹ್ಮದ್ ಸಮೀರ್ ಅಲಿಯಾಸ್ ಜಂಡು ಸಮೀರ್ ಮಹ್ಮದ್ ಪಟೇಲ್(25) ಬಂಧಿತರು.
ರೌಡಿಶೀಟರ್ ಬುಲಂದ್ ಪರ್ವೆಜ್ ಕಾಲನಿಯ ಸೈಯದ್ ಹಸನ್ ಅಲಿಯಾಸ್ ಚಿಂದಿ ಹಸನ್ ಅಲಿಯಾಸ್ ಸಿಂದಿ ಹಸನ್ (22)ಗೆ 20ರಂದು ನಸುಕಿನ ಜಾವ ಮೊಬೈಲ್ಗೆ ಕರೆ ಮಾಡಿ ಕರೆಸಿಕೊಂಡು ಬಂಧಿತ ನಾಲ್ವರು ಸೇರಿ ಮದ್ಯ ಮತ್ತು ಸೇಂದಿ ಸೇವನೆ ಬಳಿಕ ಮಾತಿನ ಚಕಮಕಿ ನಡೆಯಿತು. ಸಿಟ್ಟಿಗೆದ್ದ ನಾಲ್ವರು ಸೇರಿ ಕೊಲೆ ಮಾಡಿ ಶವವನ್ನು ಹತ್ತಿರದಲ್ಲಿದ್ದ ಪಾಲಿಕೆ ಕಸದ ತೊಟ್ಟಿಯಲ್ಲಿ ಬಿಸಾಕಿ ಪರಾರಿಯಾಗಿದ್ದರು.
ಕೊಲೆಯಾದವನ ತಂದೆ ಸೈಯದ್ ಅಬ್ಬಾಸ್ ಅಲಿ ನೀಡಿದ ದೂರಿನನ್ವಯ ಪೊಲೀಸ್ ಆಯುಕ್ತ ಎನ್. ಸತೀಶಕುಮಾರ್, ಡಿಸಿಪಿ ಡಿ. ಕಿಶೋರಬಾಬು, ಎಸಿಪಿ ಎಸ್.ಎಚ್. ಸುಬೇದಾರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಸೋಮಲಿಂಗ ಕಿರದಳ್ಳಿ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
ಅಂಬಾಜಿ ಧನೇಕರ್, ಮಲ್ಲಿಕಾರ್ಜುನ, ಶಿವಶರಣಪ್ಪ ಮಂಗಲಗಿ, ಪ್ರಕಾಶ ಬಾಗೇವಾಡಿ, ನಾಗೇಂದ್ರ ಸಗರ, ಶಿವಾನಂದ ಪೂಜಾರಿ, ಚನ್ನಬಸಯ್ಯ ಮಠಪತಿ, ಶರಣು ನರಗಾ ಅವರನ್ನು ಒಳಗೊಂಡ ತಂಡದ ಕಾರ್ಯಾಚರಣೆಗೆ ಪೊಲೀಸ್ ಆಯುಕ್ತ ಸತೀಶಕುಮಾರ್ ಶ್ಲಾಘಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.