ಜಿಲ್ಲೆ

ರೋಹಿಣಿ ಸಿಂಧೂರಿ ರಕ್ಷಣೆಗೆ ನಿಂತವರು ಯಾರು? : ಸಾ.ರಾ.ಮಹೇಶ್ ಪ್ರಶ್ನೆ

ಮೈಸೂರು: ಭ್ರಷ್ಟಾಚಾರ, ಸರ್ಕಾರಿ ಹಣ ದುರ್ಬಳಕೆ ಆರೋಪ ಎದುರಿಸುತ್ತಿರುವ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ರಕ್ಷಣೆ ಮಾಡುತ್ತಿರುವವರು ಯಾರು? ಎಂದು ಮಾಜಿ ಶಾಸಕ ಸಾ.ರಾ.ಮಹೇಶ್ ಪ್ರಶ್ನಿಸಿದರು.

ಬಿಜೆಪಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇವರ ವಿರುದ್ಧ ಕ್ರಮ ವಹಿಸಿಲ್ಲ. ಇದರ ಹಿಂದೆ ಐಎಎಸ್ ಲಾಬಿ ಕೆಲಸ ಮಾಡುತ್ತಿದೆ. ರೋಹಿಣಿ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಎಲ್ಲರನ್ನೂ ಕೋರ್ಟ್‌ಗೆ ಎಳೆಯಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಗುಡುಗಿದರು.

ರೋಹಿಣಿ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಸ್ಥಳೀಯ ಸಂಸ್ಥೆಗಳ ಅನುಮೋದನೆ ಪಡೆದಿರಲಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ 13 ರೂ.ಗೆ ದೊರೆಯುವ ಬ್ಯಾಗ್‌ಗೆ 52 ರೂ. ಖರೀದಿಸಿ ಸಾರ್ವಜನಿಕ ಹಣ ಅಪವ್ಯಯ ಮಾಡಲಾಗಿತ್ತು.

ಜತೆಗೆ, ಜಿಲ್ಲಾಧಿಕಾರಿ ಅಧಿಕೃತ ನಿವಾಸವಾದ ಪಾರಂಪರಿಕ ಕಟ್ಟಡದ ವ್ಯಾಪ್ತಿಯಲ್ಲಿ 50 ಲಕ್ಷ ರೂ.ವೆಚ್ಚದಲ್ಲಿ ಒಳಾಂಗಣ ಈಜುಕೊಳ, ಜಿಮ್, ಅನುಮತಿ ಇಲ್ಲದ ಕಟ್ಟಡ ನವೀಕರಣ ಮಾಡಿ 16.35 ಲಕ್ಷ ರೂ. ದುಂದುವೆಚ್ಚ ಮಾಡಲಾಗಿತ್ತು. ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದಲ್ಲಿ 24 ಕರೊನಾ ಸೋಂಕಿತರು ಮೃತಪಟ್ಟಿದ್ದರು.

ಈ ಕುರಿತು ತನಿಖೆ ನಡೆಸಲು ಆಗ್ರಹಿಸಿದೆ. ಆದರೀಗ ಇಡೀ ತನಿಖೆಯನ್ನೇ ದಾರಿ ತಪ್ಪಿಸಲಾಗುತ್ತಿದೆ ಎಂದೂ ದೂರಿದರು.

ತನಿಖೆ ಕುರಿತು 4 ಆದೇಶಗಳು ಬದಲಾವಣೆ ಮಾಡಿದವರು ಯಾರು? ಇದೀಗ ಏನು ಹುನ್ನಾರ ಮಾಡುತ್ತಿದ್ದೀರಿ? ರೋಹಿಣಿ ಸಿಂಧೂರಿ ಹಿಂದೆ ಯಾರು ಇದ್ದಾರೆ ಎಂದು ಪ್ರಶ್ನಿಸಿದರು.

ಸರ್ಕಾರದ ಈಗಿನ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿಂದಿನ ಇಬ್ಬರು ಮುಖ್ಯಕಾರ್ಯದರ್ಶಿ ಕೊನೇ ಘಳಿಗೆಯಲ್ಲಿ ಆದೇಶಗಳನ್ನು ಬದಲು ಮಾಡಿದ್ದಾರೆ. ಪ್ರಾಥಮಿಕ ತನಿಖಾ ವರದಿಯಲ್ಲಿ ಏನು ಬಂದಿದೆ ಎಂಬುದು ಗೊತ್ತಿದೆ. ನನ್ನ ಮೇಲೆ ರೋಹಿಣಿ ಮಾಡಿರುವ ಆರೋಪಗಳು ತನಿಖೆಯಿಂದ ನಿರಾಧಾರ ಎಂಬುದು ಸಾಬೀತು ಆಗಿದೆ. ಆದರೆ, ಆರೋಪ ರುಜುವಾತಾದರೂ ರೋಹಿಣಿ ವಿರುದ್ಧ ಏಕೆ ಕ್ರಮ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ನಗರದ ಆಡಳಿತ ತರಬೇತಿ ಸಂಸ್ಥೆ ಅತಿಥಿಗೃಹದಿಂದ ಕುರ್ಚಿ, ಮೇಜು ಸೇರಿದಂತೆ 23 ವಸ್ತುಗಳನ್ನು ರೋಹಿಣಿ ಅವರು ತೆಗೆದುಕೊಂಡು ಹೋಗಿದ್ದಾರೆ. ಇದು ಕಳ್ಳತನ ಅಲ್ವೇ? ತನಿಖಾ ವರದಿಯಲ್ಲಿ ಕ್ರಮ ತೆಗೆದುಕೊಳ್ಳುವ ಬದಲು 46 ಸಾವಿರ ರೂ. ವೇತನ ಕಡಿತಗೊಳ್ಳಲು ಶಿಫಾರಸು ಮಾಡಲಾಗಿದೆ. ಕದ್ದಿರುವ ವಸ್ತುಗಳನ್ನು ಜಪ್ತಿ ಮಾಡಿಲ್ಲ ಏಕೆ ಎಂದು ಕೇಳಿದರು.

ರೋಹಿಣಿ ವಿರುದ್ಧದ ಅಕ್ರಮಗಳ ಕುರಿತ ತನಿಖೆಯ ದಿಕ್ಕನ್ನು ತಪ್ಪಿಸಲಾಗಿದೆ. ಈ ಬೆಳವಣಿಗೆಯಿಂದ ಬಹಳಷ್ಟು ನೋವಾಗುತ್ತಿದೆ. ನಾನು ಸುಮ್ಮನಿರುವುದೇ ದೌರ್ಬಲ್ಯವಲ್ಲ. ಈ ಕುರಿತು ಕಾನೂನು ಹೋರಾಟ ನಡೆಸುತ್ತೇನೆ. ಅವರ ವಿರುದ್ಧ ನಡೆಯುತ್ತಿದ್ದ ತನಿಖೆಯ ಸತ್ಯಾಸತ್ಯತೆ ಹೊರಬರಬೇಕು ಎಂದು ಆಗ್ರಹಿಸಿದರು

ಜೆಡಿಎಸ್ ಕೋರ್ ಕಮಿಟಿ ಸಭೆಗೆ ಶಾಸಕ ಜಿ.ಟಿ.ದೇವೇಗೌಡರು ಬರಬಹುದು. ಈಗಲೂ ಅವರೇ ನಮ್ಮ ನಾಯಕರು. ಅವರ ಜನ್ಮದಿನಕ್ಕೆ ಶುಭಾಶಯ ತಿಳಿಸಿರುವೆ. ಜೆಡಿಎಸ್ ಸಹ ಕುಟುಂಬ. ಇಲ್ಲಿಯೂ ಸಹ ಅಣ್ಣ-ತಮ್ಮಂದಿರ ಸಣ್ಣಪುಟ್ಟ ಜಗಳಗಳು ಇರುತ್ತವೆ. ಮುಂದಕ್ಕೆ ಅವುಗಳೆಲ್ಲ ಸರಿಹೋಗುತ್ತವೆ ಎಂದರು

ಜೆಡಿಎಸ್‌ನ ಹಾಲಿ ಹಾಗೂ ಮಾಜಿ ಶಾಸಕರನ್ನು ಕಾಂಗ್ರೆಸ್‌ಗೆ ಸೆಳೆಯುತ್ತೇನೆ ಎಂದಿರುವ ಸಿ.ಪಿ.ಯೋಗೇಶ್ವರ್ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಈಗ ಎಷ್ಟು ರಾಜ್ಯದಲ್ಲಿ ಅಧಿಕಾರದಲ್ಲಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆದ್ದಿದೆ. ಮೊದಲು ಕಾಂಗ್ರೆಸ್ ಪಕ್ಷವನ್ನು ಸರಿ ಮಾಡಲಿ ಎಂದು ತಿರುಗೇಟು ನೀಡಿದರು.

--------