ಜಿಲ್ಲೆ

ರೋಮಾಂಚನ ಸೃಷ್ಟಿಸಿದ 90 ಜೋಡಿಗಳ ಜಟ್ಟಿ ಕಾಳಗ

ಚಿತ್ರದುರ್ಗ: ಸೇರಿಗೆ ಸವ್ವಾ ಸೇರು, ಪಟ್ಟಿಗೆ ತಿರುಗೇಟು ನೀಡಲು ಸಜ್ಜಾದ ಕುಸ್ತಿಪಟುಗಳು ತೊಡೆ ತಟ್ಟಿ ನಿಂತರು. ತೀರ್ಪುಗಾರರ ಸೂಚನೆಗಾಗಿ ಎದುರು ನೋಡುತ್ತಿದ್ದರು. ಚಾಲನೆ ದೊರೆತ್ತಿದ್ದೇ ತಡ ಕಣ ರಂಗೇರಿತು.

ಶರಣ ಸಂಸ್ಕೃತಿ ಉತ್ಸವ, ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಮುರುಘಾಮಠದ ಆವರಣದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಜಯದೇವ ಜಂಗೀಕುಸ್ತಿಯಲ್ಲಿ ಕಂಡ ದೃಶ್ಯವಿದು.

ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿ ರಾಜ್ಯದ ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ವಿವಿಧ ಭಾಗಗಳ ಕುಸ್ತಿಪಟುಗಳು ಸಜ್ಜಾಗಿ ಬಂದಿದ್ದರು.

ಜಟ್ಟಿಗಳ ಕಾಳಗ ವೀಕ್ಷಿಸಲು ಪ್ರೇಕ್ಷಕರ ಗ್ಯಾಲರಿ ಭರ್ತಿಯಾಗಿತ್ತು. ಸೆಣಸಾಡುವ ದೃಶ್ಯಗಳನ್ನು ಕಣ್ತುಂಬಿಕೊಂಡು ಶಿಳ್ಳೆ, ಕೇಕೆ, ಚಪ್ಪಾಳೆಯೊಂದಿಗೆ ಪ್ರೋತ್ಸಾಹಿಸಿದರು.

ಪುರುಷರ ವಿಭಾಗದಲ್ಲಿ 70 ಜೋಡಿ, ಮಹಿಳಾ ವಿಭಾಗದಲ್ಲಿ 20 ಸೇರಿ ಒಟ್ಟು 90 ಜೋಡಿ ಭಾಗವಹಿಸಿದ್ದರು. ತೀರ್ಪುಗಾರರಾಗಿ ಪೈಲ್ವಾನ್ ತಿಪ್ಪೇಸ್ವಾಮಿ, ಮಹೇಂದ್ರನಾಥ್, ಮರಡಿ ಪೈಲ್ವಾನ್ ತಿಪ್ಪೇಸ್ವಾಮಿ, ಆಫೀಜ್, ಮೂರ್ತಣ್ಣ, ಮೈಸೂರಿನ ಪೈಲ್ವಾನ್ ಅಮೃತ್ ಕಾರ್ಯನಿರ್ವಹಿಸಿದರು.

ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ ಕಳಸದ, ಸದಸ್ಯ ಡಾ.ಬಸವಕುಮಾರ ಶ್ರೀ, ಬಸವ ಹರಳಯ್ಯ ಶ್ರೀ, ಮಲ್ಲಿಕಾರ್ಜುನ ಶ್ರೀ ಸೇರಿ ವಿವಿಧ ಮಠಾಧೀಶರಿದ್ದರು.