ಮೈಸೂರು: ಚಾಮುಂಡಿಬೆಟ್ಟದ ಪರಿಸರ ನಾಶಕ್ಕೆ ಕಾರಣವಾಗುವ ರೋಪ್‌ವೇ ಯೋಜನೆ ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಚಾಮುಂಡಿಬೆಟ್ಟ ಉಳಿಸಿ ಸಮಿತಿ ಸದಸ್ಯ ಪರಶುರಾಮೇಗೌಡ ಹೇಳಿದರು.
ರೋಪ್‌ವೇ ಯೋಜನೆಯಿಂದ ಪರಿಸರಕ್ಕೆ ಆಗುವ ದುಷ್ಪರಿಣಾಮದ ಕುರಿತು ತಜ್ಞರು ಮನವರಿಕೆ ಮಾಡಿಕೊಟ್ಟ ನಂತರ ಈ ಹಿಂದಿನ ಸರ್ಕಾರ ಯೋಜನೆಯನ್ನು ಕೈಬಿಡುವ ನಿರ್ಧಾರ ಪ್ರಕಟಿಸಿತು. ಆದರೆ, ಕೈಬಿಟ್ಟ ಯೋಜನೆಯನ್ನು ಮತ್ತೆ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿರುವುದು ಸರಿಯಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಚಾಮುಂಡಿಬೆಟ್ಟ ಪರಿಸರಸೂಕ್ಷ್ಮ ಪ್ರದೇಶವಾಗಿದ್ದು, ರೋಪ್‌ವೇ ಯೋಜನೆಯಿಂದ ಪ್ರಾಣಿ, ಪಕ್ಷಿಗಳು ನೆಮ್ಮದಿಯ ವಾತಾವರಣ ಕಳೆದುಕೊಳ್ಳುತ್ತವೆ. ಅಲ್ಲದೆ, ಬೆಟ್ಟದಲ್ಲಿ ಕೈಗೊಂಡ ಅಭಿವೃದ್ಧಿ ಚಟುವಟಿಕೆಯಿಂದ ಭೂಕುಸಿತ ಕಂಡು ಬರುತ್ತಿದ್ದು, ರೋಪ್‌ವೇ ನಿರ್ಮಾಣ ಗೊಂಡರೆ ಭೂಕುಸಿತ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯೋಜನೆ ಕೈಬಿಡಬೇಕು ಎಂದು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲಾಗುವುದು. ಯೋಜನೆ ಜಾರಿಗೆ ಒತ್ತಾಯಿಸುತ್ತಿರುವ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳನ್ನು ಭೇಟಿಯಾಗಿ ಅವರ ಮನವೊಲಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ಪಾರಂಪರಿಕ ತಜ್ಞ ಪ್ರೊ.ಎನ್.ಎಸ್. ರಂಗರಾಜು ಮಾತನಾಡಿ, ಬೆಟ್ಟಕ್ಕೆ ತೆರಳಲು ಮೂರು ಕಡೆಗಳಿಂದ ರಸ್ತೆ ಹಾಗೂ ಮೆಟ್ಟಿಲುಗಳು ಇವೆ. ಕೆಲವೇ ನಿಮಿಷಗಳಲ್ಲಿ ಬೆಟ್ಟದ ಮೇಲ್ಭಾಗಕ್ಕೆ ತೆರಳಬಹುದು. ಹೀಗಾಗಿ ರೋಪ್‌ವೇ ಯೋಜನೆಯ ಅವಶ್ಯಕತೆ ಇಲ್ಲ. ಮೆಟ್ಟಿಲು ಹಾಗೂ ದಾರಿ ಇಲ್ಲದ ಬೆಟ್ಟಗಳಲ್ಲಿ ಇಂತಹ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸೂಕ್ತ ಎಂದರು.
ಚಾಮುಂಡಿಬೆಟ್ಟ ಗಟ್ಟಿ ಕಲ್ಲಿನಿಂದ ರೂಪುಗೊಂಡ ಬೆಟ್ಟವಲ್ಲ, ಸಣ್ಣ ಸಣ್ಣ ಗುಡ್ಡಗಳು ಒಡಗೂಡಿ ಸಡಿಲ ಮಣ್ಣಿನಿಂದ ರೂಪುಗೊಂಡ ಬೆಟ್ಟವಾಗಿದೆ. ಬೆಟ್ಟದಲ್ಲಿ ಪರಿಸರ ಸ್ನೇಹಿಯಾದ ಅಭಿವೃದ್ಧಿ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಬೇಕು. ಪರಿಸರದ ಮೇಲೆ ದುಷ್ಪರಿಣಾಮ ಬೀರುವ ರೋಪ್‌ವೇ ಅಂತಹ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಹೇಳಿದರು.
ಮೈಸೂರು ಪ್ರವಾಸೋದ್ಯಮ ದೃಷ್ಟಿಯಿಂದ ಸಾಕಷ್ಟು ಬೆಳೆದಿದೆ. ವಷಾಂತ್ಯಕ್ಕೆ ನಗರಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿರುವ ಪ್ರವಾಸಿ ಗರೇ ಇದಕ್ಕೆ ಸಾಕ್ಷಿ. ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ನಗರದಲ್ಲಿ ವಾಹನ ದಟ್ಟಣೆ ಕಂಡುಬರುತ್ತಿದೆ. ಹೀಗಾಗಿ ಪ್ರವಾಸೋದ್ಯಮ ಹೆಸರಿನಲ್ಲಿ ಮತ್ತಷ್ಟು ಯೋಜನೆಗಳನ್ನು ಜಾರಿಗೊಳಿಸುವ ಅವಶ್ಯಕತೆ ಇಲ್ಲ. ಚಾಮುಂಡಿಬೆಟ್ಟವನ್ನು ಪ್ರವಾಸಿ ತಾಣವಾಗಿ ಪರಿಗಣಿಸದೆ ಧಾರ್ಮಿಕ ತಾಣವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಪ್ರೊ. ಕಾಳಚನ್ನೇಗೌಡ, ಮಲ್ಲಮ್ಮ, ಭಾಗ್ಯಶಂಕರ್ ಇದ್ರು.