ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನಿಂದ ಜ. 31ರಂದು ನಗರದಲ್ಲಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಸೈಕಲ್ ರೇಸ್ ಸ್ಪರ್ಧೆ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 7ಕ್ಕೆ ನಗರದ ಬಸ್ ನಿಲ್ದಾಣ ಪಕ್ಕದ ಶಿವಸಾಯಿ ಬಜಾರ್ ಹತ್ತಿರದಿಂದ ಸ್ಫರ್ಧೆ ಆರಂಭವಾಗಿ, ನೌಬಾದ್ ಬಸವೇಶ್ವರ ವೃತ್ತಕ್ಕೆ ತೆರಳಿ ಪುನಃ ಶಿವಸಾಯಿ ಬಜಾರ್ವರೆಗೆ ಬರಬೇಕು. 10 ಕಿಮೀ ಓಟದ ಸ್ಪರ್ಧೆ ಇದಾಗಿದೆ ಎಂದು ರೋಟರಿ ಅಧ್ಯಕ್ಷ ಹಾವಶೆಟ್ಟಿ ಪಾಟೀಲ್ ತಿಳಿಸಿದ್ದಾರೆ.
8 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಗಿಯರ್ ಸೈಕಲ್ ಬಳಸುವುದಕ್ಕೆ ಅವಕಾಶವಿಲ್ಲ. ಪ್ರಥಮ ಬಹುಮಾನ ಎಂಟಿಬಿ ಸೈಕಲ್, ದ್ವಿತೀಯ ಬಹುಮಾನ 2100 ರೂ., ತೃತೀಯ ಬಹುಮಾನ 1100 ರೂ. ಇದೆ. ನಗರದ ಮೋಹನ್ ಮಾರ್ಕೆಟ್ ನಲ್ಲಿರುವ ದಿಲೀಪ ಸೈಕಲ್ ಸ್ಟೋರ್ ನಲ್ಲಿ ಇದೇ 29ರೊಳಗೆ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಮಾಹಿತಿಗೆ 08482-226451/ 9448125349/ 9986792323/9448226122ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ವಿವಿಧೆಡೆ ಭೇಟಿ: ಸೈಕಲ್ ಸ್ಪರ್ಧೆ ಹಿನ್ನೆಲೆಯಲ್ಲಿ ರೋಟರಿ ಪದಾಧಿಕಾರಿಗಳ ಪ್ರಮುಖರು ಬುಧವಾರ ನಗರದ ಜೀಜಾಮಾತಾ, ಸಮತಾ ಮತ್ತು ಅರುಣೋದಯ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು. ಸ್ಪರ್ಧೆ ಕೇವಲ ವಿದ್ಯಾರ್ಥಿಗಳಿಗೆ ಇದೆ. ಬರುವ ದಿನಗಳಲ್ಲಿ ವಿದ್ಯಾರ್ಥಿನಿಯರಿಗೆ ರಂಗೋಲಿ, ಪೇಂಟಿಂಗ್ ಇತರೆ ಸ್ಪರ್ಧೆ ಆಯೋಜಿಸುವುದಾಗಿ ರೋಟರಿ ಅಧ್ಯಕ್ಷ ಹಾವಶೆಟ್ಟಿ ಪಾಟೀಲ್ ಹೇಳಿದರು. ಸೋಮಶೇಖರ ಪಾಟೀಲ್, ಪರಮೇಶ್ವರ ಬಿರಾದಾರ, ವಿಜಯಕುಮಾರ ಗೌರೆ ಇತರರಿದ್ದರು.