ಹಾಸನ: ಹಾಸನ ನಗರವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ಮಾಡುವ ಉದ್ದೇಶದೊಂದಿಗೆ ಹಾಸನ ರೋಟರಿ ಕ್ಲಬ್ ಸಂಸ್ಥೆಯ ವತಿಯಿಂದ ಪ್ಲಾಸ್ಟಿಕ್ ಮರುಬಳಕೆ ಮೂರು ಬುಟ್ಟಿಗಳನ್ನು ಸಾರ್ವಜನಿಕ ಬಳಕೆಗಾಗಿ ಎಂ.ಜಿ ರಸ್ತೆಯ ಫುಡ್ ಕೋರ್ಟಿನಲ್ಲಿ ಉಚಿತವಾಗಿ ಸ್ಥಾಪಿಸಿದೆ.
ನಗರಸಭೆ ಆಯುಕ್ತ ಯೋಗಾನಂದ ಅವರು ಮೂರು ಪ್ಲಾಸ್ಟಿಕ್ ಮರುಬಳಕೆ ಬುಟ್ಟಿಗಳನ್ನು ಉದ್ಘಾಟಿಸಿ ಮಾತನಾಡಿ, ರೋಟರಿ ಸಂಸ್ಥೆಯ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಶ್ಲಾಘನೀಯ. ಅವರ ಕಾರ್ಯಕ್ರಮಗಳಿಗೆ ನಗರಸಭೆ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ತ್ಯಾಜ್ಯ ನಿರ್ವಹಣೆ ಸಮಾಜಕ್ಕೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ತ್ಯಾಜ್ಯ ಸಮಸ್ಯೆಗೆ ಮೂಲ ಪ್ಲಾಸ್ಟಿಕ್. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಪ್ಲಾಸ್ಟಿಕ್ ಅವಿಭಾಜ್ಯ ಅಂಗವಾಗಿ ಬೆರೆತು ಹೋಗಿದೆ. ಬಳಕೆ ಮಾಡಿದ ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಕವರ್‌ಗಳು ಮತ್ತು ಇತರ ಪ್ಲಾಸ್ಟಿಕ್ ವಸ್ತುಗಳನ್ನು ಪ್ರತ್ಯೇಕವಾಗಿ ಶೇಖರಿಸಿದರೆ ಮರುಬಳಕೆ ಮಾಡಲು ಸಾಧ್ಯ. ಮೂಲದಲ್ಲೇ ಪ್ಲಾಸ್ಟಿಕ್‌ಅನ್ನು ಹಸಿ ಕಸದೊಂದಿಗೆ ಮಿಶ್ರಣವಾಗುವುದನ್ನು ತಪ್ಪಿಸಿದರೆ ತ್ಯಾಜ್ಯ ನಿರ್ವಹಣೆ ಸುಲಭವಾಗುತ್ತದೆ ಎಂದು ಹೇಳಿದರು.
ರೋಟರಿ ಕ್ಲಬ್ ಮಿಡ್ ಟೌನ್ ಸಂಸ್ಥೆಯ ಅಧ್ಯಕ್ಷರಾದ ಮಮತಾ ಪಾಟೀಲ್ ಅವರು ಮಾತನಾಡಿ, ಸಾರ್ವಜನಿಕರು ಪ್ಲಾಸ್ಟಿಕ್ ಮರುಬಳಕೆ ಬುಟ್ಟಿಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಮತ್ತು ಬುಟ್ಟಿಗಳ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಹಾಸನ ನಗರಸಭೆ ಮತ್ತು ಕ್ಲಿಯರಿನ್ ಸಂಸ್ಥೆಗೆ ಅಭಿನಂದನೆಗಳನ್ನು ಸಲ್ಲಿಸಿದರು.
ರೋಟರಿ ಸಹಾಯಕ ಗವರ್ನರ್ ಡಾ .ಸೌಮ್ಯಮಣಿ ಮಾತನಾಡಿ, ಸಾರ್ವಜನಿಕರು ಬರೀ ಪ್ಲಾಸ್ಟಿಕ್ ವಸ್ತುಗಳನ್ನು ಮಾತ್ರ ಬುಟ್ಟಿಯಲ್ಲಿ ಹಾಕಿ ಉಳಿದ ಆಹಾರವನ್ನು ಪ್ರತ್ಯೇಕ ಬುಟ್ಟಿಯಲ್ಲಿ ಹಾಕಬೇಕು ಹಾಗೂ ಮುಂದಿನ ದಿನಗಳಲ್ಲಿ ಪಟ್ಟಣದ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಮರುಬಳಕೆ ಬುಟ್ಟಿಗಳನ್ನು ತೆರೆಯಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ಲಿಯರಿನ್ ಸಂಸ್ಥೆಯ ಸಂಸ್ಥಾಪಕ ಚಂದ್ರಶೇಖರ್, ನಗರಸಭೆ ಪರಿಸರ ಅಭಿಯಂತರ ವೆಂಕಟೇಶ್, ಫುಡ್ ಕೋರ್ಟ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ರೋಟರಿ ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.