ಹಾಸನ: ರೋಟರಿ ಸಂಸ್ಥೆಯು ಸಾಕಷ್ಟು ಪರಿಣಾಮಕಾರಿ ಜನೋಪಯೋಗಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಸಂಸ್ಥೆ ವಿಶ್ವದ ಗಮನ ಸೆಳೆದಿದೆ ಎಂದು ರೋಟರಿ ಜಿಲ್ಲೆ ನಿಯೋಜಿತ ಜಿಲ್ಲಾ ಪಾಲಕ ಪಾಲಾಕ್ಷ ಹೇಳಿದರು.
ಇತ್ತೀಚೆಗೆ ನಡೆದ ರೋಟರಿ ಕ್ಲಬ್ ಆಫ್ ಕ್ವಾಂಟಾದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿ,ಉತ್ತಮ ಜೀವನ ನಡೆಸಲು ಅಗತ್ಯವಿರುವಷ್ಟು ಸಂಪತ್ತನ್ನು ಮಾತ್ರ ನಮ್ಮಲ್ಲಿ ಇರಿಸಿಕೊಂಡು ಸಮಾಜ ಸೇವೆಯ ಮೂಲಕ ಸಮಾಜದ ಬಡ ವರ್ಗವನ್ನು ಮೇಲೆತ್ತುವ ಗುಣವನ್ನು ನಾವು ಬೆಳೆಸಿಕೊಂಡಾಗ ಮಾತ್ರ ನಮ್ಮದು ನಿಸ್ವಾರ್ಥದ ಬದುಕು ಎಂದೆನಿಸಿಕೊಳ್ಳುತ್ತದೆ ಎಂದರು.
ಸ್ವಯಂ ಪ್ರೇರಿತರಾಗಿ ನಮ್ಮಲ್ಲಿ ಸಮಾಜ ಸೇವೆಯ ಗುಣ ಬೆಳೆಸಿಕೊಂಡರೆ ಪಡೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಹೆಚ್ಚುಹೆಚ್ಚು ಸುಖವಿದೆ ಎಂಬುದನ್ನು ಅರಿತುಕೊಳ್ಳಬಹುದು ಅಲ್ಲದೇ ಬದುಕಿನಲ್ಲಿ ಎದುರಾಗುವ ಸವಾಲುಗಳಿಗೆ ಹೊಂದಿಕೊಂಡು ಜೀವನ ಮಾಡುವ ಮನಸ್ಥಿತಿಯನ್ನು ಸಾಮಾಜಿಕ ಬದುಕು ಕಲಿಸುತ್ತದೆ ಎಂದು ಹೇಳಿದರು.
ರೋಟರಿ ಜಿಲ್ಲಾ ಸಹಾಯಕ ಪಾಲಕ ಸಂತೋಷ್ ಮಾತನಾಡಿ, ರೋಟರಿ ಸಮಾಜವನ್ನು ಒಂದು ಕುಟುಂಬವೆಂದು ಭಾವಿಸಿ ಸಮಾಜ ಸೇವೆ ಮಾಡುತ್ತಿದೆ. ಪ್ರತಿಯೊಂದು ಸಂದರ್ಭ ಮತ್ತು ಸಂಕಷ್ಟದಲ್ಲಿ ರೋಟರಿ ಕ್ಲಬ್ ಆಪತ್ಬಾಂಧವನ ರೀತಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ರೋಟರಿ ಸಮಾಜದಲ್ಲಿ ಸಾಮಾಜಿಕ ಚಟುವಟಿಕೆಗಳಿಗೆ ಶಕ್ತಿ ಸಹಕಾರ ನೀಡುತ್ತಾ ವಿಶ್ವದಾದ್ಯಂತ ವ್ಯಾಪಿಸಿದೆ ಎಂದರು.
ರೋಟರಿ ಕ್ಲಬ್ ಆಫ್ ಕ್ವಾಂಟಾ ನಿರ್ಗಮಿತ ಅಧ್ಯಕ್ಷ ಬಿ.ಆರ್ ಬೊಮ್ಮೇಗೌಡ ಮಾತನಾಡಿ, ರೋಟರಿಯ ಮುಖ್ಯ ಉದ್ದೇಶ ಸಮಾಜ ಸೇವೆ ಜೊತೆ ಜೊತೆಗೆ ಸ್ನೇಹ,ಶಾಂತಿ,ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ರೋಟರಿ ಶ್ರಮಿಸುತ್ತಿದೆ. ರೋಟರಿ ಸಮಾಜದೊಟ್ಟಿಗೆ ನಿಂತಿದೆ ಹಾಗಾಗೀ ಸಮಾಜ ಕೂಡ ರೋಟರಿಯನ್ನು ಪೋಷಿಸಿಕೊಂಡು ಮುನ್ನಡೆಯುತ್ತಿದೆ ಎಂದರು.
2023-24ನೇ ಸಾಲಿನಲ್ಲಿ ರೋಟರಿ ಕ್ಲಬ್ ಆಫ್ ಕ್ವಾಂಟಾ ಸಾಕಷ್ಟು ಸಮಾಜ ಸೇವಾ ಕಾರ್ಯಕಗಳನ್ನು ಕೈಗೊಂಡಿದ್ದು, ಸರ್ಕಾರಿ ಶಾಲೆಗಳಿಗೆ ಬೆಂಚು-ಡೆಸ್ಕ್,ಕಂಪ್ಯೂಟರ್,ಆರೋಗ್ಯಕ್ಕೆ ಸಂಬಂಧಿಸಿಂತೆ ದಂತ ಚಿಕಿತ್ಸಾಲಯಕ್ಕೆ ಯಂತ್ರೋಪಕರಣಗಳು ಸೇರಿದಂತೆ ಸಾಕಷ್ಟು ಗಣನೀಯ ಸೇವೆ ಮಾಡಿದೆ ಇದೆಲ್ಲವೂ ನಮಗೆ ತೃಪ್ತಿ ತಂದಿದೆ ಎಂದರು.
ಪ್ರಸಕ್ತ ಸಾಲಿನ ಅಧ್ಯಕ್ಷ ಹರೀಶ್ ಕುಮಾರ್ ಅಧಿಕಾರ ಸ್ವೀಕರಿಸಿ ಮಾತನಾಡಿ, ರೋಟರಿ ಕ್ಲಬ್ ಆಫ್ ಕ್ವಾಂಟಾದ 14 ವರ್ಷಗಳ ಪಯಣದಲ್ಲಿ ಸಮಾಜಕ್ಕೆ ಸಾಕಷ್ಟು ನೀಡಿದ್ದೇವೆ. ಮುಂದಿನ ದಿನಗಳಲ್ಲೂ ಸಾಮಾಜಿಕವಾಗಿ ಹೆಚ್ಚು ತೊಡಗಿಸಿಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ರೋಟರಿ ಝೋನ್ 9ಎ ವಲಯ ಸೇನಾನಿ ಸತೀಶ್, ನಿರ್ಗಮಿತ ಕಾರ್ಯದರ್ಶಿ ಎಂ.ಡಿ.ನಾಗೇಶ್, ಕಾರ್ಯದರ್ಶಿ ಅರುಣ್, ನಿರ್ಗಮಿತ ವಲಯ ಸೇನಾನಿ ಕೆ.ಎಲ್.ರಮೇಶ್, ಖಜಾಂಚಿ ಸುರೇಶ್ ಸೇರಿದಂತೆ ಇತರರು ಇದ್ದರು.