ವಿಜಯಪುರ: ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಹಿತದೃಷ್ಟಿಯಿಂದ ಅವರ ಆರೋಗ್ಯ ಮತ್ತು ಮನರಂಜನೆಗಾಗಿ ಉದ್ಯಾನವನ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು.
ಮಂಗಳವಾರ ಸಂಜೆ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಫಾರ್ಮಸಿ ವಿಭಾಗ, ಎನ್‌ಆರ್‌ಸಿ ಮಕ್ಕಳ ವಿಭಾಗ, ತುರ್ತು ವಿಭಾಗ, ಚಿಕ್ಕಮಕ್ಕಳ ತುರ್ತು ವಿಭಾಗ, ಡಯಾಲಿಸಿಸ್ ವಿಭಾಗ ಹಾಗೂ ಅಡುಗೆ ಕೋಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಂತರ ಸಂಬಂಧಿತ ಅಧಿಕಾರಿಗಳೊಂದಿಗೆ ಮಾತನಾಡಿದರು.
ಎಲ್ಲ ಅಗತ್ಯ ಔಷಧಿಗಳನ್ನು ಶೇಖರಣೆ ಮಾಡಿಟ್ಟುಕೊಳ್ಳಬೇಕು. ಆಸ್ಪತ್ರೆಯಲ್ಲಿ ದಾಖಲಾಗುವ ಒಳರೋಗಿಗಳಿಗೆ ಗುಣಮಟ್ಟದ ಆಹಾರ ಪೂರೈಸಬೇಕು. ಆಸ್ಪತ್ರೆಯಲ್ಲಿ ಆಧುನಿಕ ಅಡುಗೆ ಕೋಣೆ ನಿರ್ಮಾಣಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಉಪಚಾರಕ್ಕಾಗಿ ಬಂದ ರೋಗಿಗಳೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆ ಕುರಿತು ಮಾಹಿತಿ ಪಡೆದುಕೊಂಡರು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಹಾಗೂ ತಾಯಂದಿರ ಯೋಗಕ್ಷೇಮ ವಿಚಾರಿಸಿ, ಅವರಿಗೆ ಒದಗಿಸುತ್ತಿರುವ ವೈದ್ಯಕೀಯ ಸೇವೆಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಆವರಣದಲ್ಲಿರುವ ಪಿ.ಎಸ್.ಎ. ಪ್ಲಾಂಟ್, ಸಖಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು, ಆರ್.ಟಿ.ಪಿ.ಸಿ.ಆರ್ ಸೆಂಟರ್, ಎಮ್.ಆರ್.ಐ ಸೆಂಟರ್, ಎಮ್.ಸಿ.ಎಸ್, ಆಸ್ಪತ್ರೆಯ ಎಲ್ಲಾ ವಿಭಾಗ ಸೇರಿದಂತೆ ಪೂರ್ಣಗೊಳ್ಳುವ ಹಂತದಲ್ಲಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ಹಾಗೂ ಟ್ರಾಮಾ ಕೇರ್ ಕಟ್ಟಡವನ್ನು ಹಸ್ತಾಂತರಿಸಿದ ಕಡತಗಳ ಕುರಿತು ಪರಿಶೀಲನೆ ನಡೆಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಎಲ್. ಲಕ್ಕಣ್ಣವರ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ರಚಿಸಿದ ಪುಸ್ತಕವನ್ನು ನೀಡಿ ಜಿಲ್ಲಾಧಿಕಾರಿಯನ್ನು ಬರಮಾಡಿಕೊಂಡರು. ವೈದ್ಯಾಧಿಕಾರಿ ಡಾ. ಎ.ಜಿ. ಬಿರಾದಾರ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಕಟ್ಟಿಮನಿ, ಸಹಾಯಕ ಆಡಳಿತಾಧಿಕಾರಿ ಎ.ಎ. ಸಿಂದಗಿಕರ, ಡಾ. ಆನಂದ ಝಳಕಿ, ಡಾ. ಪರಶುರಾಮ ದೇವಮಾನೆ, ಆಸ್ಪತ್ರೆ ಇತರೆ ಸಿಬ್ಬಂದಿ ಇದ್ದರು.