ಬೇಲೂರು: ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮತ್ತು ರೋಗಿಗಳಿಗೆ ಶೀಘ್ರ ಪ್ರಯೋಗಾಲಯದ ವರದಿ ಸಿಗಬೇಕೆಂಬ ಆಶಯದೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ಪ್ರಯೋಗಾಲಯ ನಿರ್ಮಿಸಲಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 15ನೇ ಹಣಕಾಸು ಯೋಜನೆಯಡಿ ನೂತನವಾಗಿ ನಿರ್ಮಿಸಿರುವ ಪ್ರಯೋಗಾಲಯ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಪ್ರಯೋಗಾಲಯದ ವರದಿ ಪಡೆಯಲು ಹಾಸನ-ಚಿಕ್ಕಮಗಳೂರು-ಬೆಂಗಳೂರಿಗೆ ಕಳುಹಿಸಿದ ನಂತರ ವರದಿ ಬರೋವರೆಗೂ ಕಾಯಬೇಕಾಗಿತ್ತು. ಆದರೆ ಈಗ ಬೇಲೂರಿನ ಪ್ರಯೋಗಾಲಯದಲ್ಲೇ ಒಂದೆರಡು ಮಾದರಿ ಬಿಟ್ಟರೆ ಬಹುತೇಕ ಎಲ್ಲ ವರದಿಯನ್ನು ಇಲ್ಲಿಯೇ ಲ್ಯಾಬ್‌ನಲ್ಲಿ ಪಡೆಯಲು ಸಹಕಾರಿಯಾಗಲಿದೆ. 55 ಲಕ್ಷ ರೂ. ಅನುದಾನದಲ್ಲಿ ನೂತನವಾಗಿ ಪ್ರಯೋಗಾಲಯ ಕಟ್ಟಡ ನಿರ್ಮಿಸಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರ ಸದುಪಯೋಗವನ್ನು ತಾಲೂಕಿನ ಜನತೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ರೋಗಿಗಳೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು. ಈ ಹಿಂದೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದರೆ ತಕ್ಷಣವೇ ಹಾಸನ-ಚಿಕ್ಕಮಗಳೂರಿಗೆ ಕಳುಹಿಸುವ ಕೆಲಸವಾಗುತಿತ್ತು. ಈಗ ಇಲ್ಲಿನ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಯಾರನ್ನೂ ಖಾಸಗಿ ಕ್ಲಿನಿಕ್ ಮತ್ತು ಖಾಸಗಿ ಪ್ರಯೋಗಾಲಯಕ್ಕೆ ಕಳುಹಿಸಬಾರದು. ಅಂತಹದ್ದೇನಾದರೂ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುವುದು. ಇಲ್ಲಿನ ಸ್ಕಾೃನಿಂಗ್ ಮಿಷನ್ ಬಳಕೆ ಮಾಡುತ್ತಿಲ್ಲದಿರುವುದು ಗಮನಕ್ಕೆ ಬಂದಿದೆ. ಈ ವಿಚಾರವಾಗಿ ಈಗಾಗಲೇ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಮತ್ತು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಶೀಘ್ರ ಸಿಬ್ಬಂದಿ ನೇಮಕ ಮಾಡಲಾಗುವುದು. ಆಸ್ಪತ್ರೆ ಹಿಂಭಾಗ ಆಸ್ಪತ್ರೆ ವೈದ್ಯರ ವಾಸಕ್ಕಾಗಿ ಕಟ್ಟಿರುವ ಕಟ್ಟಡ ಕಳಪೆಯಿಂದ ಕೂಡಿದ್ದು, ಅದನ್ನು ಗುಣಮಟ್ಟದಲ್ಲಿ ಕಾಮಗಾರಿ ಮಾಡಿದ ನಂತರ ಉದ್ಘಾಟಿಸಲಾಗುವುದು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಆಡಳಿತ ವೈದ್ಯಾಧಿಕಾರಿ ಡಾ.ಸುಧಾ, ಇಂಜಿನಿಯರ್ ರಶ್ಮಿ, ತಾಪಂ ಮಾಜಿ ಅಧ್ಯಕ್ಷ ರಂಗೇಗೌಡ, ಆಸ್ಪತ್ರೆ ವೈದ್ಯರು, ಸಿಬ್ಬಂದಿ ಇದ್ದರು.