ಜಿಲ್ಲೆ

ರೋಗಿಗಳ ಸುರಕ್ಷತೆ ಕಾಪಾಡಲು ಮುಂದಾಗಿ

ಚಿತ್ರದುರ್ಗ: ತಾಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಗುಣಮಟ್ಟದ ಸೇವಾ ಭರವಸೆಯ ಮೂಲಕ ರೋಗಿಗಳ ಸುರಕ್ಷತೆ ಕಾಪಾಡಲು ಮುಂದಾಗಿ ಎಂದು ಟಿಎಚ್‌ಒ ಡಾ.ಬಿ.ವಿ.ಗಿರೀಶ್ ಸಿಬ್ಬಂದಿಗೆ ಸೂಚಿಸಿದರು.

ತಾಲೂಕಿನ ಲಕ್ಷ್ಮಿಸಾಗರ-ವಿಜಾಪುರ ಪಿಎಚ್‌ಸಿಯಲ್ಲಿ ಶನಿವಾರ ವಿಶ್ವ ರೋಗಿಗಳ ಸುರಕ್ಷತಾ ದಿನದ ಅಂಗವಾಗಿ ಆರೋಗ್ಯ ಸೇವಾ ಸಿಬ್ಬಂದಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.

ಆರೋಗ್ಯ ರಕ್ಷಣೆ ವೇಳೆ ರೋಗಿಗಳಿಗೆ ಸಂಭವಿಸುವ ಅಪಾಯ, ದೋಷ, ಹಾನಿ ತಡೆಗಟ್ಟುವುದು ಹಾಗೂ ಕಡಿಮೆ ಮಾಡುವುದೇ ಇದರ ಪ್ರಮುಖ ಗುರಿಯಾಗಿದ್ದು, ಸುರಕ್ಷತೆಯೂ ಜಾಗತಿಕ ಮಟ್ಟದಲ್ಲಿ ಆರೋಗ್ಯದ ಆದ್ಯತೆಯಾಗಿದೆ. ನಿರಂತರ ಸುಧಾರಣೆಗಾಗಿ ಶಿಸ್ತು, ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಗುಣಮಟ್ಟದ ಆರೋಗ್ಯ ಸೇವೆಯ ಪ್ರಯೋಜನಗಳನ್ನು ಅರಿತು ಸಮಯೋಚಿತ, ಸಮಾನ, ಸಮಗ್ರ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸಿ ಎಂದರು.

ವಿಜಾಪುರ ಪಿಎಚ್‌ಸಿ ಆಡಳಿತ ವೈದ್ಯಾಧಿಕಾರಿ ಡಾ.ಜಯಶ್ರೀ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ ರೆಡ್ಡಿ, ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ಕಾತ್ಯಾಯನಮ್ಮ, ಆಶಾ ಕಾರ್ಯಕರ್ತೆಯರು ಇತರರಿದ್ದರು.