ಜಿಲ್ಲೆ

ರೋಗಿಗಳ ವೈಯಕ್ತಿಕ ಆರೋಗ್ಯ ದಾಖಲಾತಿ ಚುರುಕು

ಮರಿದೇವ ಹೂಗಾರ, ಹುಬ್ಬಳ್ಳಿ

ಅತ್ಯಧಿಕ ಸಂಖ್ಯೆಯ ರೋಗಿಗಳ ವೈಯಕ್ತಿಕ ಆರೋಗ್ಯ ದಾಖಲಾತಿಯನ್ನು (ಪಿಎಚ್​ಆರ್) ಆಯುಷ್ಮಾನ್ ಭಾರತ ಹೆಲ್ತ್ ಅಕೌಂಟ್(ಎಬಿಎಚ್)ಗೆ ಲಿಂಕ್ ಮಾಡುವಲ್ಲಿ ಧಾರವಾಡ ಜಿಲ್ಲೆ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ. ಇನ್ನು ಆಸ್ಪತ್ರೆಗಳನ್ನು ಪರಿಗಣನೆಗೆ ತೆಗೆದುಕೊಂಡಾಗ ಧಾರವಾಡ ಜಿಲ್ಲಾಸ್ಪತ್ರೆ ದೇಶದಲ್ಲಿಯೇ ನಂ. 1 ಸ್ಥಾನದಲ್ಲಿದೆ.

ಈ ವರ್ಷದ ಆಗಸ್ಟ್ 1ರಿಂದ ಡಿ. 12ರವರೆಗೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್​ಎಚ್​ಎ) ದೇಶಾದ್ಯಂತ ಮಾಹಿತಿ ಕಲೆ ಹಾಕಿದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 57,066 ಜನ ರೋಗಿಗಳ ವೈಯಕ್ತಿಕ ಆರೋಗ್ಯ ದಾಖಲೆಯನ್ನು ಜೋಡಣೆ ಮಾಡಲಾಗಿದೆ. ಚಿಕಿತ್ಸೆಗೆಂದು ಬರುವ ರೋಗಿಗಳ ವೈಯಕ್ತಿಕ ಮಾಹಿತಿ ಅಂದರೆ, ರಕ್ತದ ಗುಂಪು, ಅವರಿಗಿರುವ ರೋಗ, ಪಡೆದ ಚಿಕಿತ್ಸೆಯ ಮಾಹಿತಿ ಇರುತ್ತದೆ. ಇದನ್ನು ಆಯುಷ್ಮಾನ್ ಭಾರತ ಹೆಲ್ತ್ ಅಕೌಂಟ್​ಗೆ ಜೋಡಣೆ ಮಾಡಲಾಗುತ್ತದೆ. ಇವರು ರಾಜ್ಯ ಬಿಟ್ಟು ಹೊರ ರಾಜ್ಯಕ್ಕೆ ಚಿಕಿತ್ಸೆಗೆ ಹೋದರೂ ರೋಗಿಯ ಮಾಹಿತಿ ವೈದ್ಯರ ಕೈಗೆ ಲಭಿಸುತ್ತದೆ. ಇದರಿಂದ ಚಿಕಿತ್ಸೆ ನೀಡಲು ವೈದ್ಯರಿಗೆ ಸುಲಭವಾಗುತ್ತದೆ. ಹಾಗಾಗಿಯೇ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ, ರೋಗಿಗಳ ವೈಯಕ್ತಿಕ ಮಾಹಿತಿ ಪಡೆಯಲು ಆಯಾ ರಾಜ್ಯಗಳಿಗೆ ಆದೇಶಿಸಿತ್ತು. ಈಗಾಗಲೇ ದೇಶಾದ್ಯಂತ ಈ ಪ್ರಕ್ರಿಯೆ ಚಾಲನೆಯಲ್ಲಿದೆ.

ಜಾಗೃತಿ ಮೂಡಿಸಲು ಕ್ರಮ: ಚಿಕಿತ್ಸೆಗೆ ಆಯುಷ್ಮಾನ್ ಭಾರತ ಕಾರ್ಡ್ ತೆಗೆದುಕೊಂಡು ಬರುವ ರೋಗಿಗಳು, ಚಿಕಿತ್ಸೆ ಪಡೆದು ಮನೆಗೆ ಮರಳುತ್ತಾರೆ. ತಮಗಿರುವ ರೋಗ, ಪಡೆದ ಚಿಕಿತ್ಸೆ ಕುರಿತ ವೈಯಕ್ತಿಕ ಮಾಹಿತಿಯನ್ನು ಆನ್​ಲೈನ್​ನಲ್ಲಿ ನೋಂದಣಿ ಮಾಡಿಸುವುದಿಲ್ಲ. ಹಾಗಾಗಿ ಸಂಖ್ಯೆ ಏರುಮುಖವಾಗುತ್ತಿರಲಿಲ್ಲ. ಈಗೀಗ ಆಯಾ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಚಿಕಿತ್ಸೆಗೆ ಬರುವ ರೋಗಿಗಳನ್ನು ಕರೆದುಕೊಂಡು ಹೋಗಿ, ಪಿಎಚ್​ಆರ್ ಅನ್ನು ಎಬಿಎಚ್​ಗೆ ಜೋಡಿಸಲಾಗುತ್ತಿದೆ. 15 ನಿಮಿಷ ಸಮಯ ಮೀಸಲಿಟ್ಟರೆ ವೈಯಕ್ತಿಕ ಮಾಹಿತಿ ಎಲ್ಲವೂ ದಾಖಲಾಗಲಿದೆ ಎನ್ನುತ್ತಾರೆ ವೈದ್ಯರು.

ಖಾಸಗಿ ಆಸ್ಪತ್ರೆ ತರಹ

ಖಾಸಗಿ ಆಸ್ಪತ್ರೆಯಲ್ಲಿ ಹೆಸರು ನೋಂದಣಿಯಿಂದ ಹಿಡಿದು, ವೈದ್ಯರು ನೀಡುವ ಚಿಕಿತ್ಸೆ ಕುರಿತು ದಾಖಲಾಗುತ್ತದೆ. ಇದೇ ರೀತಿ ಸರ್ಕಾರಿ ಆಸ್ಪತ್ರೆಗಳಲ್ಲೂ ಈ ಮಾದರಿ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ, ಈ ಸೂಚನೆ ನೀಡಿದೆ. ಇದಕ್ಕೊಂದು ಸ್ಮಾರ್ಟ್ ಕಾರ್ಡ್ ಇರುತ್ತದೆ. ಅದನ್ನು ರೋಗಿಯು ಚಿಕಿತ್ಸೆ ಪಡೆಯಲು ಇಚ್ಛಿಸುವ ಆಸ್ಪತ್ರೆಗೆ ಕೊಟ್ಟರೆ ಸಾಕು, ಆತ ಇದುವರೆಗೆ ಪಡೆದ ಚಿಕಿತ್ಸೆಯ ವಿವರ ವೈದ್ಯರಿಗೆ ಅರಿಯಲು ಸಹಾಯವಾಗುತ್ತದೆ.

* ಧಾರವಾಡ ಜಿಲ್ಲೆಗೆ ಆಯುಷ್ಮಾನ್ ಉತ್ಕೃಷ್ಟತಾ ಪುರಸ್ಕಾರ

ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚು ರೋಗಿಗಳ ವೈಯಕ್ತಿಕ ಆರೋಗ್ಯದ ಮಾಹಿತಿ ದಾಖಲಾಗಿದೆ. ಹಾಗಾಗಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್​ಎಚ್​ಎ)ವು ಆಯುಷ್ಮಾನ್ ಉತ್ಕೃಷ್ಟತಾ ಪುರಸ್ಕಾರವನ್ನು ನೀಡಿದೆ.

ಆಸ್ಪತ್ರೆಗಳು, ನೋಂದಾಯಿಸಿದ ರೋಗಿಗಳ ಸಂಖ್ಯೆ

ಧಾರವಾಡ ಜಿಲ್ಲಾಸ್ಪತ್ರೆ 32,509

ಕಿಮ್್ಸ 14,896

ಡಿಮ್ಹಾನ್ಸ್ 7868

ಕಲಘಟಗಿ 677

ನವಲಗುಂದ 737

ಕುಂದಗೋಳ 379

-------------

ಒಟ್ಟು 57,066

ರೋಗಿಗಳ ವೈಯಕ್ತಿಕ ಆರೋಗ್ಯ ದಾಖಲೆಯನ್ನು (ಪಿಎಚ್​ಆರ್) ಆಯುಷ್ಮಾನ್ ಭಾರತ ಹೆಲ್ತ್ ಅಕೌಂಟ್(ಎಬಿಎಚ್)ಗೆ ಜೋಡಣೆ ಮಾಡುವ ಪ್ರಕ್ರಿಯೆ ಚುರುಕುಗೊಂಡಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ನಮ್ಮ ಜಿಲ್ಲೆಗೆ ಆಯುಷ್ಮಾನ್ ಉತ್ಕೃಷ್ಟತಾ ಪುರಸ್ಕಾರ ನೀಡಿದೆ.

-ಡಾ. ಶಶಿ ಪಾಟೀಲ, ಧಾರವಾಡ ಡಿಎಚ್​ಒ