ಬಾಗಲಕೋಟೆ: ವೈದ್ಯಕೀಯ ಕ್ಷೇತ್ರದಲ್ಲಿ ಅರವಳಿಕೆ ತಜ್ಞರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವೈದ್ಯಕೀಯ ಕಾರ್ಯಾಗಾರಗಳು ವೈದ್ಯರು ಮತ್ತು ವಿದ್ಯಾರ್ಥಿಗಳು ಹೊಸ ಸಂಶೋಧನೆಗಳನ್ನು ತಿಳಿದುಕೊಳ್ಳಲು ಮಹತ್ವದ ವೇದಿಕೆಯಾಗಿವೆ ಎಂದು ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ ಸೊಲಬನ್ನವರ್ ಹೇಳಿದರು.
ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯಲ್ಲಿ ವಿಶ್ವ ಅರವಳಿಕೆ ದಿನದ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಒಂದು ದಿನದ ವೈದ್ಯಕೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರವು ಇಂದು ಅಪಾರ ಬೆಳವಣಿಗೆ ಸಾಽಸಿದೆ. ಯುವ ವೈದ್ಯರಿಗೆ ವೃತ್ತಿಯ ಬಗ್ಗೆ ಪ್ರೀತಿ ಇರಲಿ. ನಿಮ್ಮ ವರ್ತನೆಯಿಂದ ರೋಗಿಗಳ ಮನಸ್ಸಿಗೆ ನೋವಾಗದಿರಲಿ ಎಂದು ಕಿವಿ ಮಾತು ಹೇಳಿದರು.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಡಾ.ಮಾಧುರಿ ಕುರ್ಡಿ ಮಾತನಾಡಿ, ವೈದ್ಯರು ರೋಗಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಧಾರವಾಡ ಎಸ್‌ಡಿಎಂ ಮೆಡಿಕಲ್ ಕಾಲೇಜಿನ ಡಾ.ಸಮೀರ ದೇಸಾಯಿ ಉಪನ್ಯಾಸ ನೀಡಿದರು. ಅರವಳಿಕೆ ವಿಭಾಗದ ಮುಖ್ಯಸ್ಥ ಡಾ.ಶಿವಾನಂದ ಹುಲಕುಂದ, ಅರವಳಿಕೆ ತಜ್ಞ ಡಾ.ಛಾಯಾ ಜೋಶಿ ಮತ್ತು ಡಾ.ಶಿಲ್ಪಾ ಮಾಸೂರ ಸೇರಿದಂತೆ ಇತರರು ಇದ್ದರು.