ಹುಬ್ಬಳ್ಳಿ: ಅಸಮರ್ಪಕ ಔಷಧಗಳ ವಿತರಣೆ, ಸಿಬ್ಬಂದಿ ಕೊರತೆಯ ನೆಪ, ಬಯೋಮೆಟ್ರಿಕ್ನಲ್ಲಿ ಹಾಜರಾತಿ ಹಾಕಿ ವೈಯಕ್ತಿk ಕೆಲಸಕ್ಕೆ ತೆರಳುವುದು ಸೇರಿ ರೋಗಿಗಳ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇಲ್ಲಿಯ ಪಾಲಿಕೆ ಆಯುಕ್ತರ ಕಚೇರಿ ಸಭಾಭವನದಲ್ಲಿ ಶುಕ್ರವಾರ ಹು-ಧಾ ಪೂರ್ವ ಕ್ಷೇತ್ರ ವ್ಯಾಪ್ತಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜನರ ಆರೋಗ್ಯ ರಕ್ಷಣೆ ವಿಚಾರದಲ್ಲಿ ಯಾವುದೇ ರೀತಿಯ ರಾಜೀ ಇಲ್ಲ. ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದರು.
ರೋಗಿಗಳಿಗೆ ಸಬೂಬು ಹೇಳಿ, ಔಷಧ ವಿತರಿಸದೇ, ಸರಿಯಾಗಿ ತಪಾಸಣೆ ಮಾಡದೆ ನಿರ್ಲಕ್ಷ ತೋರುತ್ತಿರುವ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಕ್ಷೇತ್ರದಲ್ಲಿ ಬಡವರು, ಕೂಲಿ ಕಾರ್ವಿುಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರೆಲ್ಲ ಸರ್ಕಾರಿ ಆಸ್ಪತ್ರೆಗಳನ್ನೆ ಅವಲಂಬಿಸಿದ್ದಾರೆ. ಹೀಗಾಗಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬರುವ ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಪಾಲಿಕೆ ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಇದ್ದರು.