ಎಚ್.ಡಿ.ಕೋಟೆ: ಎಚ್‌ಐವಿ ಮಾನವನ ರೋಗನಿರೋಧಕ ಶಕ್ತಿಯನ್ನೇ ಕುಂದಿಸುವ ಒಂದು ವೈರಾಣು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.
ಪಟ್ಟಣದ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ತಾಲೂಕು ಕಾನೂನು ಸೇವಾ ಸಮಿತಿ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಸುರಕ್ಷಿತ ಲೈಂಗಿಕ ಸಂಪರ್ಕ, ಪರೀಕ್ಷೆ ಮಾಡದ/ ಸೋಂಕಿತರ ರಕ್ತ ವರ್ಗಾವಣೆ ಮಾಡುವುದು, ಸಂಸ್ಕರಿಸದ ಚೂಪು ಸಾಧನಗಳು, ಸೂಜಿ ಹಾಗೂ ಸೋಂಕು ಇರುವ ತಾಯಿಂದ ತನ್ನ ಮಗುವಿಗೆ ಎಚ್‌ಐವಿ ಹರಡುತ್ತದೆ. ಹೀಗಾಗಿ ಮದುವೆಗೂ ಮೊದಲು ಲೈಂಗಿಕ ಸಂಪರ್ಕ ಮಾಡದೇ ಇರುವುದು, ಏಕ ಸಂಗಾತಿಯೊಂದಿಗೆ ಮಾತ್ರ ಲೈಂಗಿಕ ಸಂಪರ್ಕ ಮಾಡುವುದು, ಬಹು ಸಂಗಾತಿಗಳಿದ್ದಲ್ಲಿ ಲೈಂಗಿಕ ಕ್ರಿಯೆಯಲ್ಲಿ ಪ್ರತಿಸಲ ತಪ್ಪದೆ ಕಾಂಡೋಮ್ ಉಪಯೋಗಿಸುವುದು, ಪರೀಕ್ಷಿಸಿದ ರಕ್ತವನ್ನು ಮಾತ್ರ ಪಡೆಯುವುದು, ಸಂಸ್ಕರಣೆ ಮಾಡಿದ ಸೂಜಿ ಸಿರಿಂಜ್ ಬಳಸುವುದರಿಂದ ಸೋಂಕು ತಡೆಗಟ್ಟಬಹುದು. ಎಚ್‌ಐವಿ ಪರೀಕ್ಷೆಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಆರ್‌ಸಿಎಚ್ ಅಧಿಕಾರಿ ಡಾ. ಜಯಂತ್ ಮಾತನಾಡಿ, ಎಚ್‌ಐವಿ ತಡೆಗಟ್ಟಬೇಕಾದರೆ ಮುಖ್ಯವಾಗಿ ಜನರಿಗೆ ಆರೋಗ್ಯ ಕುರಿತು ಶಿಕ್ಷಣ ನೀಡಬೇಕು. ಆಶಾ ಕಾರ್ಯಕರ್ತರು ಪ್ರತಿ ಮನೆಗೂ ಭೇಟಿ ನೀಡುವಾಗ ಈ ರೋಗದ ಬಗ್ಗೆ ಹೆಚ್ಚಾಗಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಸಿವಿಲ್ ನ್ಯಾಯಾಧೀಶ ಸತೀಶ್.ಕೆ.ಜೆ ಮಾತನಾಡಿ, ಅಂಗವಿಕಲರಿಗೆ ಕೇಂದ್ರ ಸರ್ಕಾರ 2016ರಲ್ಲಿ ಗುರುತಿನ ಚೀಟಿ ಹಾಗೂ ಅವರ ಮಕ್ಕಳಿಗೆ ವಿಶೇಷ ಶಾಲೆ, ಉನ್ನತ ಶಿಕ್ಷಣ ಪಡೆಯಬೇಕಾದರೆ ಪರೀಕ್ಷಾ ಶುಲ್ಕ ಸೇರಿದಂತೆ ಯಾವುದೇ ಶುಲ್ಕ ಪಾವತಿಸದಂತೆ ಆದೇಶ ಮಾಡಲಾಗಿದೆ. ಅಂದ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್, ವಿದ್ಯಾರ್ಥಿವೇತನ, ಉಚಿತ ಸಾಧನ ಸಲಕರಣೆಗಳು, ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್‌ಗಳಲ್ಲಿ ಉಚಿತ ಸಾಲ ಸೌಲಭ್ಯ, ಉಚಿತ ಬಸ್‌ಪಾಸ್, ರೈಲ್ವೆ ಪಾಸ್, 1 ಲಕ್ಷ ರೂ.ವರೆಗೆ ಉಚಿತವಾಗಿ ವೈದ್ಯಕೀಯ ಶಸ್ತ್ರಚಿಕಿತ್ಸೆ ಪರಿಹಾರ ನಿಧಿ, ಶಿಶುಪಾಲನೆ, ಭತ್ಯೆ ಯೋಜನೆ ಮತ್ತು ನಿರುದ್ಯೋಗ ಭತ್ಯೆ ಯೋಜನೆ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ದಿನೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಆಶಾ, ಹಿರಿಯ ವಕೀಲರಾದ ಸರಸ್ವತಿ, ನಾಗಶ್ರೀ, ನಯನಾ, ರೋಜಾ, ಶೃತಿ, ಆರೋಗ್ಯ ಇಲಾಖೆ ಸಿಬ್ಬಂದಿ ನಾಗೇಂದ್ರ, ರವಿರಾಜ್, ಸರಳಾ, ಅಶೋಕ, ರಾಮು, ಲೋಲಾಕ್ಷಿ, ಪ್ರತಾಪ್, ವಿಕಲಚೇತನರ ತಾಲೂಕು ಸಂಯೋಜಕ ಮಹದೇವು ಇತರರು ಇದ್ದರು.