ಬಾಗಲಕೋಟೆ: ನವಜಾತ ಶಿಶುವಿನಿಂದ ವೃದ್ಧರವರೆಗೆ ಪಿಜಿಯೋಥೆರಪಿ ಚಿಕಿತ್ಸೆ ಬೇಕಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ರೋಗ ತಡೆಗಟ್ಟುವಲ್ಲಿ ಫಿಜಿಯೋಥೆರಪಿ ಚಿಕಿತ್ಸೆಯ ಅಗತ್ಯವಿದೆ ಎಂದು ಸಂಜಯಗಾಂಧಿ ಟ್ರೊಮಾ ಸಂಸ್ಥೆಯ ಪ್ರಾಚಾರ್ಯ ಮತ್ತು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾದ ಡಾ.ಸಾಯಿಕುಮಾರ ಅಭಿಪ್ರಾಯಪಟ್ಟರು.
ಅವರು ನಗರದ ಮೆಡಿಕಲ್ ಕಾಲೇಜಿನ ಅತ್ರೆಯ ಸಭಾಂಗಣದಲ್ಲಿ ಸೋಮವಾರ ನಡೆದ ಬಿ.ವ್ಹಿ.ವ್ಹಿ ಸಂಘದ ಫಿಜಿಯೋಥೆರಪಿ ಕಾಲೇಜಿನ ಪ್ರಥಮ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು. ಬದಲಾದ ಜೀವನ ಶೈಲಿಯಿಂದಾಗಿ ಅನೇಕ ಪ್ರಕಾರದ ದೈಹಿಕ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಫಿಟ್ ಇಂಡಿಯಾ ಪರಿಕಲ್ಪನೆ ಸಾಕಾರಗೊಳ್ಳಲು ಫಿಜಿಯೋಥೆರಪಿ ತಜ್ಞರ ಪಾತ್ರ ಅನನ್ಯವಾಗಿದೆ. ಬಾಗಲಕೋಟೆಯಂತಹ ಸಣ್ಣ ನಗರದಲ್ಲಿ ವಿವಿಧ ಪ್ರಕಾರದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಡಾ.ವೀರಣ್ಣ ಚರಂತಿಮಠ ಅವರ ಪ್ರಯತ್ನ ಅಭಿನಂದನಾರ್ಹ ಎಂದರು.
ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಸಿ.ಚರಂತಿಮಠ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಫಿಜಿಯೋಥೆರಪಿ ಅತ್ಯಂತ ಅಗತ್ಯವಾದ ವೈದ್ಯಕೀಯ ಚಿಕಿತ್ಸೆಯಾಗಿದೆ. ಈ ಭಾಗದಲ್ಲಿ ಫಿಜಿಯೋಥೆರಪಿ ಪರಿಣತರ ಕೊರತೆಯನ್ನು ಪರಿಹರಿಸಲು 2019 ರಲ್ಲಿ ಫಿಜಿಯೋಥೆರಪಿ ಕಾಲೇಜನ್ನು ಆರಂಭಿಸಲಾಯಿತು. ಬಾಗಲಕೋಟೆ ಜಿಲ್ಲೆಯಲ್ಲಿ ಸ್ಥಾಪನೆಯಾದ ಪ್ರಥಮ ಮತ್ತು ಏಕೈಕ ಫಿಜಿಯೋಥೆರಪಿ ಕಾಲೇಜು ಇದು ಎನ್ನುವ ಹೆಮ್ಮೆ ನಮ್ಮದು. ಇನ್ನು ಕೆಲವೇ ದಿನಗಳಲ್ಲಿ ಕಾಲೇಜು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ಬಿ.ಪಿ.ಟಿ ಪ್ರವೇಶ ದಾಖಲಾತಿ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಎಮ್.ಪಿ.ಟಿ ಕೋರ್ಸ್ ಆರಂಭಿಸಲು ವಿಶ್ವವಿದ್ಯಾಲಯಕ್ಕೆ ಪರಿವೀಕ್ಷಣೆಗಾಗಿ ಅರ್ಜಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಯೋಗ ಮತ್ತು ನ್ಯಾಚುರೊಪತಿ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಡಾ.ಸಾಯಿಕುಮಾರ ಅವರನ್ನು ಹೃತ್ಪೂರ್ವಕವಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ (ಬೇವೂರ), ಫಿಜಿಯೋಥೆರಪಿ ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಭಾರ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಅತಿಥಿಗಳನ್ನು ಸ್ವಾಗತಿಸಿ ಫಿಜಿಯೋಥೆರಪಿ ಕಾಲೇಜಿನ ಬೆಳವಣಿಗೆ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಸುಚಿತ್ರಾ ದಿವಾನಮಲ್ ಪದವಿಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಾ.ಭವಾನಿ ಬಳ್ಳೂರ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು ಮತ್ತು ಡಾ.ಮಹಾಂತೇಶ ಬಿರಡಿ ವಂದಿಸಿದರು. ನೇಹಾ ಮತ್ತು ನಾರಾಯಣ ಕಾರ್ಯಕ್ರಮವನ್ನು ನಿರೂಪಿಸಿದರು.