ಜಿಲ್ಲೆ

ರೋಗ ಗುಣಪಡಿಸುವ ಶಕ್ತಿ ಯೋಗಕ್ಕಿದೆ : ಯೋಗ ರಾಯಭಾರಿ ಪ್ರದಿಪ್​ ಅರಸ್​ ಅಭಿಮತ, ಅಧ್ಯಾತ್ಮ ಯೋಗ ಅನುಸರಿಸಲು ಕರೆ

ರಾಮನಗರ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪತಂಜಲಿ ಯೋಗ ಸಮಿತಿ ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ 24್ಡ7 ಸುದ್ದಿವಾಹಿನಿ ಸಹಯೋಗದಲ್ಲಿ ನಗರದ ಹೊನ್ನಮ್ಮ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯುರೋಪ್​ ಒಕ್ಕೂಟದ ಭಾರತದ ಯೋಗ ರಾಯಭಾರಿ ಪ್ರದಿಪ್​ ಅರಸ್​, ಪ್ರಪಂಚಕ್ಕೆ ಯೋಗವನ್ನು ನೀಡಿದ ದೇಶ ಭಾರತ ಇಂದು ಮಧುಮೇಹಿಗಳು ಮತ್ತು ಹೃದಯ ರೋಗಿಗಳ ರಾಜಧಾನಿ ಆಗುತ್ತಿದೆ. ಇದಕ್ಕೆ ನಮ್ಮ ಆಧುನಿಕ ಜೀವನ ಶೈಲಿ ಕಾರಣ. ಇದರಿಂದ ಹೊರಬರಬೇಕಿದೆ. ಕೆಮ್ಮಿನಿಂದ ಕ್ಯಾನ್ಸರ್​ವರೆಗಿನ ಎಲ್ಲ ರೋಗಗಳನ್ನೂ ಗುಣಪಡಿಸುವ ಶಕ್ತಿ ಯೋಗ ಹೊಂದಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯವಂತ ಭಾರತವನ್ನು ನಿರ್ಮಾಣ ಮಾಡಬೇಕು. ಅಧ್ಯಾತ್ಮ ಯೋಗವನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಕರೆ ನೀಡಿದರು.

ಹಣಕ್ಕಿಂತ ಆರೋಗ್ಯ ಮುಖ್ಯ: ಯೋಗ ದಿನದಂದು ವಿಶೇಷ ಉಪನ್ಯಾಸ ನೀಡಿದ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂದ ಅಧ್ಯಕ್ಷ ಮಂಜುನಾಥ್​, ಯೋಗ ಕೇವಲ ಆಸನಗಳು ಮಾತ್ರವಲ್ಲ. ಅದು ನಮ್ಮ ದೇಶದ ಸಂಸತಿ, ಪರಂಪರೆ. ಇಂದು ಯೋಗಕ್ಕೆ ವಿಶ್ವ ಮಾನ್ಯತೆ ದೊರೆತಿದೆ. ಯೋಗದಿಂದ ನಮ್ಮ ಬದುಕು ಸುಂದರವಾಗುತ್ತಿದೆ. ಹಣ ಗಳಿಕೆಯಿಂದ ಎಲ್ಲವೂ ಸಾಧ್ಯ ಎನ್ನುವ ಮನೋಭಾವಕ್ಕೆ ನಾವೆಲ್ಲಾ ಬಂದು ತಲುಪಿದ್ದೇವೆ. ಆದರೆ ಹಣ ಮುಖ್ಯವಲ್ಲ. ಆರೋಗ್ಯ ಮುಖ್ಯ, ದೇಹ ಮತ್ತು ಮನಸ್ಸು ಆರೋಗ್ಯವಾಗಿರಬೇಕಾದರೆ ನಿರಂತರ ಯೋಗ ಅಗತ್ಯ ಎಂದರು. ಪ್ರಾಣಿ ಸಂಕುಲದಲ್ಲಿಯೇ ಮಾವನ ಜನ್ಮ ಶ್ರೇಷ್ಠ ಎನ್ನುತ್ತಾರೆ. ಶ್ರೇಷ್ಠತೆ ಕಂಡುಕೊಳ್ಳಬೇಕಾದರೆ ಮನಸ್ಸು ಮತ್ತು ದೇಹ ಎರಡೂ ಶುದ್ಧವಾಗಿ ಇರಬೇಕು. ಇದರಿಂದ ಎಲ್ಲವನ್ನೂ ಪಡೆದುಕೊಳ್ಳಬಹುದು. ಆಯಸ್ಸೂ ಹೆಚ್ಚುತ್ತದೆ ಎಂದು ವಿವರಿಸಿದರು.

ಮುಖಂಡರಾದ ಶಿವಣ್ಣ, ಪತಂಜಲಿ ಯೋಗ ಸಮಿತಿಯ ಶಿವದ್ಯಾವೇಗೌಡ, ಸುದರ್ಶನ್​ ಮುಂತಾದವರು ಇದ್ದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.

ಜೂ.26ವರೆಗೂ ಪತಂಜಲಿ ಯೋಗ ಸಮಿತಿ ಹಾಗೂ ವಿಜಯವಾಣಿ ಹಾಗೂ ದಿಗ್ವಿಜಯ 24್ಡ7 ಸುದ್ದಿವಾಹಿನಿ ಸಹಯೋಗದಲ್ಲಿ ಪ್ರತಿದಿನ ಉಚಿತವಾಗಿ ಯೋಗ ಮತ್ತು ಪ್ರಾಣಾಯಾಮ ತರಬೇತಿ ಹೊನ್ನಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಅಲ್ಲದೆ, ವರ್ಷಪೂರ್ತಿ ಯೋಗಾಭ್ಯಾಸ ಕಾರ್ಯಕ್ರಮ ಜರುಗಲಿದೆ.