ಬೆಂಗಳೂರು: ಸರಕು ಸಾಗಣೆಯನ್ನು ಸುಗಮವಾಗಿಸಲು ನೈಋತ್ಯ ರೈಲ್ವೆ ಜಾರಿಗೆ ತಂದಿರುವ ‘ರೋಲ್ ಆನ್ ರೋಲ್ ಆಫ್’ ಸೇವೆ ಮಂಗಳವಾರ ಅಧಿಕೃತವಾಗಿ ಜಾರಿಗೆ ಬಂದಿದೆ. ನೆಲಮಂಗಲದಿಂದ ಸೊಲ್ಲಾಪುರದ ಬಾಲೆಗೆ 26 ಟ್ರಕ್ಗಳನ್ನು ಹೊತ್ತ ರೈಲು ಸಂಚಾರ ಆರಂಭವಾಯಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈಲು ಸೇವೆಗೆ ಭಾನುವಾರ ಚಾಲನೆ ನೀಡಿದ್ದರಾದರೂ, ಸರಕು ತುಂಬಿದ ಟ್ರಕ್ಗಳ ಕೊರತೆ ಸೇರಿ ಇನ್ನಿತರ ಕಾರಣಗಳಿಂದ ರೈಲು ಚಿಕ್ಕಬಾಣಾವಾರದಿಂದ ವಾಪಸ್ ಬಂದಿತ್ತು. ಇದೀಗ ಮಂಗಳವಾರ ಮಧ್ಯಾಹ್ನ 1.32ಕ್ಕೆ 26 ಟ್ರಕ್ಗಳನ್ನು ಹೊತ್ತ ‘ರೋ ರೋ’ ಸೊಲ್ಲಾಪುರಕ್ಕೆ ಹೊರಟಿತು.
17 ಗಂಟೆಯಲ್ಲಿ ಸೊಲ್ಲಾಪುರಕ್ಕೆ: ರೈಲಿನಲ್ಲಿ ಅಳವಡಿಸಲಾದ ತೆರೆದ ಬೋಗಿಗಳಲ್ಲಿ ಸರಕು ತುಂಬಿದ ಟ್ರಕ್ ಅಥವಾ ಲಾರಿಯನ್ನು ಹೊತ್ತೊಯ್ಯುವ ವಿಶೇಷ ಸೇವೆ ಇದಾಗಿದೆ. ಟ್ರಕ್ ಅಥವಾ ಲಾರಿಗಳು ದಿನಗಟ್ಟಲೆ ನಿಗದಿತ ಸ್ಥಳಗಳಿಗೆ ತೆರಳುವುದನ್ನು ತಪ್ಪಿಸಲು ಈ ಸೇವೆ ಸಹಕಾರಿಯಾಗಲಿದೆ. ನೆಲಮಂಗಲದಿಂದ ಸೊಲ್ಲಾಪುರದ ಬಾಲೆಗೆ, 682 ಕಿ.ಮೀ. ಉದ್ದದ ಮಾರ್ಗವನ್ನು 17 ಗಂಟೆಯಲ್ಲಿ ರೋ ರೋ ರೈಲು ಕ್ರಮಿಸಲಿದೆ. ಆ ಮೂಲಕ ಸರಕು ಸಾಗಣೆ ಪ್ರಕ್ರಿಯೆಗೆ ವೇಗ ನೀಡಲಾಗುತ್ತಿದೆ. ಕೊಂಕಣ ರೈಲ್ವೆಯಲ್ಲಿ 21 ವರ್ಷಗಳ ಹಿಂದೆಯೇ ಈ ಸೇವೆ ಆರಂಭವಾಗಿತ್ತು.
16 ಬೋಗಿಗಳು ಖಾಲಿ: ರೋ ರೋ ರೈಲಿನಲ್ಲಿ ತೆರಳುವ ಒಂದು ಟ್ರಕ್ ಗರಿಷ್ಠ 30 ಟನ್ ಸರಕು ತುಂಬಿಕೊಂಡಿರಬೇಕು. ಆ ಟ್ರಕ್ನಲ್ಲಿನ ಸರಕಿಗೆ ಪ್ರತಿ ಟನ್ಗೆ 2,700 ರೂ. ದರ ನಿಗದಿ ಮಾಡಲಾಗಿದೆ. ಅದರಂತೆ ರೈಲಿನಲ್ಲಿ ಅಳವಡಿಸಲಾಗಿರುವ 42 ಬೋಗಿಗಳಿಂದ 34,02,000 ರೂ. ಆದಾಯ ಬರುವುದಾಗಿ ನೈಋತ್ಯ ರೈಲ್ವೆ ನಿರೀಕ್ಷಿಸಿತ್ತು. ಆದರೆ, 42 ಬೋಗಿಗಳ ಪೈಕಿ 16 ಬೋಗಿಗಳು ಖಾಲಿ ತೆರಳಿದ್ದರಿಂದ ಇಲಾಖೆಗೆ 21,06,000 ರೂ. ಮಾತ್ರ ಆದಾಯ ಬಂದಿದೆ.
ಸುರಕ್ಷತೆ ಆದ್ಯತೆ: ಮೊದಲ ರೋ ರೋ ರೈಲಿನಲ್ಲಿ ತೆರಳಿದ ಲಾರಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬೋಗಿಯಲ್ಲಿ ನಿಲ್ಲಿಸಲಾದ ಲಾರಿಗಳು ಯಾವುದೇ ಕಾರಣಕ್ಕೂ ಅತ್ತಿತ್ತ ಜಾರದಂತೆ ನಾಲ್ಕು ಕಡೆಗಳಿಂದ ಕಬ್ಬಿಣದ ಸರಪಳಿ ಮೂಲಕ ಕಟ್ಟಲಾಗಿದೆ.
ಅನುಕೂಲಗಳು?: ಕೇಂದ್ರ ಸರ್ಕಾರದ ಆಪರೇಷನ್ ಗ್ರೀನ್ ಮತ್ತು ಟಾಪ್ಗೆ ರೋ ರೋ ರೈಲು ಸೇವೆ ಸಹಕಾರಿಯಾಗಲಿದೆ. ಅದರಂತೆ ಈರುಳ್ಳಿ, ಆಲುಗೆಡ್ಡೆಯಂಥ ಕೃಷಿ ಉತ್ಪನ್ನಗಳ ಸಾಗಣೆ ಹೆಚ್ಚಿಸುವುದಕ್ಕೆ ಈ ಸೇವೆ ಸಹಕಾರಿಯಾಗಲಿದೆ. ಜತೆಗೆ, ಕೃಷಿ ಮತ್ತು ಕೈಗಾರಿಕೋದ್ಯಮಗಳ ಉತ್ಪಾದನೆಯನ್ನು ಸಾಗಿಸಲು ಅನುಕೂಲವಾಗಲಿದೆ. ಅಗತ್ಯ ವಸ್ತುಗಳನ್ನು ಶೀಘ್ರದಲ್ಲಿ ಸಾಗಿಸಲು, ವಾಯುಮಾಲಿನ್ಯ ತಡೆಯುವುದು, ಇಂಧನ ಉಳಿತಾಯದಂತಹ ಉಪಕ್ರಮಗಳಿಗೆ ರೋ ರೋ ಉತ್ತೇಜನ ನೀಡುತ್ತದೆ.
ಸೇವೆಯ ವಿಶೇಷತೆ ಏನು?