ರಾಮನಗರ: ಕನಕಪುರ ಟಿಎಪಿಸಿಎಂಎಸ್ನ ಮರಳವಾಡಿ ಶಾಖೆಯಲ್ಲಿ ನಡೆದಿದ್ದ ವಂಚನೆ ಪ್ರಕರಣ ಭೇದಿಸಿರುವ ಪೊಲೀಸರು ಆರೋಪಿಯಿಂದ 7 ಕೆ.ಜಿ. 113 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಕೆ. ಸಂತೋಷ್ ಬಾಬು, ಮರಳವಾಡಿ ಟಿಎಪಿಸಿಎಂಎಸ್ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೋವಿಂದಪ್ಪ ಎಂಬಾತ ರೈತರು ಅಡಮಾನವಿಟ್ಟ ಚಿನ್ನವನ್ನು ಖಾಸಗಿ ಬ್ಯಾಂಕ್ಗಳಲ್ಲಿ ಅಡವಿಟ್ಟು ರೈತರಿಗೆ ವಂಚಿಸಿದ್ದ. ಈ ಸಂಬಂಧ ಬ್ಯಾಂಕ್ನ ವ್ಯವಸ್ಥಾಪಕ ನದೀಂ ಎಂಬುವವರು ಕನಕಪುರ ಟೌನ್ ಠಾಣೆಗೆ ದೂರು ನೀಡಿದ್ದರು, ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡು ಆರೋಪಿ ಗೋವಿಂದಪ್ಪ ಅವರನ್ನು ಬಂಧಿಸಿ 12 ಖಾಸಗಿ ಬ್ಯಾಂಕ್ಗಳಲ್ಲಿ ಅಡವಿಟ್ಟಿದ್ದ 7 ಕೆಜಿ 113 ಗ್ರಾಂ ಚಿನ್ನಾಭರಣ, ಮನೆಯಲ್ಲಿಟ್ಟಿದ್ದ 8.27 ಲಕ್ಷ ರೂ.ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ರೈಸ್ ಪುಲ್ಲಿಂಗ್ನಲ್ಲಿ ಹಣ: ಬಂಧಿತ ಆರೋಪಿ ಗೋವಿಂದಪ್ಪ ಸುಮಾರು 1.30 ಕೋಟಿ ರೂ.ಗಳನ್ನು ರೈಸ್ ಪುಲ್ಲಿಂಗ್ ದಂಧೆಯಲ್ಲಿ ತೊಡಗಿಸಿ ಕೈಸುಟ್ಟುಕೊಂಡಿದ್ದ. ರೈಸ್ ಪುಲ್ಲಿಂಗ್ ಆಸೆಗೆ ಬಿದ್ದು, ಅಡವಿಟ್ಟ ಚಿನ್ನಾಭರಣಗಳಿಂದ ಬಂದ ಹಣವನ್ನು ಕೊಟ್ಟಿದ್ದು, ಅವರೂ ಸಹ ಕೈಕೊಟ್ಟು ಪರಾರಿ ಆಗಿದ್ದರು. ಅಲ್ಲದೆ ಬ್ಯಾಂಕ್ಗೆ ಇಟ್ಟ ಒಡವೆಗಳ ಸಾಲಕ್ಕೆ ಬಡ್ಡಿ ಕಟ್ಟಲು ಮತ್ತೊಂದು ಒಡವೆಯನ್ನು ಅಡಮಾನ ಮಾಡುತ್ತಿದ್ದ. 2018ರಿಂದಲೂ ಇದೇ ರೀತಿ ಮಾಡುತ್ತಿದ್ದ ಎಸ್ಪಿ ಮಾಹಿತಿ ನೀಡಿದರು.
ಆರ್ಬಿಐಗೆ ಮಾಹಿತಿ: ಖಾಸಗಿ ೈನಾನ್ಸ್ ಕಂಪನಿಗಳಲ್ಲಿ ಇಡಲಾಗಿದ್ದ ಒಡವೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆದರೆ ಕಳುವಾದ ಇಲ್ಲವೇ ಅಕ್ರಮವಾಗಿ ಅಡಮಾನವಿಡುವ ಕ್ರಮವನ್ನು ಪೊಲೀಸ್ ಇಲಾಖೆ ನಿಯಂತ್ರಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಈ ಹಿನ್ನೆಲೆಯಲ್ಲಿ ಇಂತಹ ಟನೆಗಳು ಮರುಕಳಿಸದಂತೆ ಕ್ರಮವಹಿಸುವ ನಿಟ್ಟಿನಲ್ಲಿ ಪ್ರಕರಣದ ಮಾಹಿತಿಯನ್ನು ಆರ್ಬಿಐನೊಂದಿಗೆ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ ಎಸ್ಪಿ ಸಂತೋಷ್ ಬಾಬು, ಟಿಎಪಿಸಿಎಂಎಸ್ನಂತಹ ಸಂ&ಸಂಸ್ಥೆಗಳೂ ಈ ಬಗ್ಗೆ ಎಚ್ಚರವಹಿಸಬೇಕು ಎಂದು ಮನವಿ ಮಾಡಿದರು.
ಚಾರ್ಜ್ಶೀಟ್ ಹಂತ: ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ನಡೆದ ಕೋಟ್ಯಂತರ ರೂ.ವಂಚನೆ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು ಚಾರ್ಜ್ಶೀಟ್ ಹಂತಕ್ಕೆ ಬಂದಿದೆ ಎಂದು ಎಸ್ಪಿ ಮಾಹಿತಿ ನೀಡಿದರು. 2021ರ ಮಾರ್ಚ್ 23ರಂದು ಮಾರುಕಟ್ಟೆ ಉಪನಿರ್ದೇಶಕರಾಗಿದ್ದ ಕೆ.ಟಿ.ವೆಂಕಟೇಶ್, ರಾಮನಗರ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಸುಮಾರು 569 ರೈತರಿಗೆ ಕೋಟ್ಯಂತರ ರೂ.ಗಳನ್ನು ನೀಡದೆ ವಂಚನೆ ಮಾಡಲಾಗಿದೆ ಎಂದು ಐಜೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ದೂರಿನ ತನಿಖೆಯನ್ನು ಬಿಡದಿ ಸಿಪಿಐ ಅವರು ಮಾಡಿದ್ದು, ಇದರಲ್ಲಿ 107 ರೀಲರ್ಗಳಿಂದ ಒಟ್ಟು 80 ಲಕ್ಷ ರೂ., ಮಾರುಕಟ್ಟೆಯ ಬ್ಯಾಂಕ್ ಖಾತೆಯಲ್ಲಿದ್ದ 54 ಲಕ್ಷ ರೂ.ಗಳನ್ನು ಹೊರತುಪಡಿಸಿ ಒಟ್ಟು 1.21 ಕೋಟಿ ರೂ.ಗಳನ್ನು ಆರೋಪಿ ಉಪನಿರ್ದೇಶಕ ಮುನ್ಷಿಬಸಯ್ಯ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಜಾಮೀನಿನ ಮೇಲಿದ್ದು, ರೀಲರ್ಗಳು, ಬ್ಯಾಂಕ್ ಖಾತೆಯಲ್ಲಿದ್ದ ಹಣ ಹಾಗೂ ಸರ್ಕಾರ ಬಿಡುಗಡೆ ಮಾಡಿದ್ದ 2 ಕೋಟಿ ರೂ.ನಲ್ಲಿ ರೈತರಿಗೆ ಬರಬೇಕಿದ್ದ ಬಾಕಿ ನೀಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಕೆ.ಎನ್.ರಮೇಶ್, ಕನಕಪುರ ಸಿಪಿಐ ಕೃಷ್ಣ, ಪಿಎಸ್ಐ ನಂದಿನಿ ಇದ್ದರು