ಜಿಲ್ಲೆ

ರೈಲ್ವೆಗೆ 1 ತಿಂಗಳಲ್ಲಿ ಕೋಟಿ ರೂ. ಆದಾಯ

ಮೈಸೂರು: ಕರೊನಾ ಸೋಂಕು ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆ ಹಿನ್ನಡೆ ಅನುಭವಿಸಿದರೂ ನೈಋತ್ಯ ರೈಲ್ವೆ ಮೈಸೂರು ವಿಭಾಗವು ದ್ವಿಚಕ್ರ ವಾಹನಗಳ ಸಾಗಣೆಯಲ್ಲಿ ಉತ್ತಮ ಸಾಧನೆ ತೋರಿದ್ದು, ಒಂದು ತಿಂಗಳ ಅವಧಿಯಲ್ಲಿ ಒಂದು ಕೋಟಿ ರೂ. ವಹಿವಾಟು ನಡೆಸಿದೆ.
ಕಡಕೊಳದಿಂದ ಗೂಡ್ಸ್ ರೈಲುಗಳ ಮೂಲಕ ಒಂದು ತಿಂಗಳ ಅವಧಿಯಲ್ಲಿ 5,500 ದ್ವಿಚಕ್ರ ವಾಹನಗಳನ್ನು ದೇಶದ ವಿವಿಧ ಭಾಗಗಳಿಗೆ ಸಾಗಣೆ ಮಾಡಲಾಗಿದ್ದು, ಇದರಿಂದ ರೈಲ್ವೆಗೆ ಒಂದು ಕೋಟಿ ರೂ. ಆದಾಯ ದೊರೆತಿದೆ. ಸರಕು ಸಾಗಣೆಗೆ ಹೆಚ್ಚಿನ ಉತ್ತೇಜನ ನೀಡಲು ವ್ಯಾಪಾರ ಅಭಿವೃದ್ಧಿ ಘಟಕ ರಚಿಸಲಾಗಿತ್ತು. ಇದೆಲ್ಲದರ ಪರಿಣಾಮವಾಗಿ ನೈಋತ್ಯ ರೈಲ್ವೆ ಮೈಸೂರು ವಿಭಾಗ ಉತ್ತಮ ಸಾಧನೆ ತೋರಿದೆ.
ಕಳೆದ ಒಂದು ತಿಂಗಳಿನಲ್ಲಿ ದ್ವಿಚಕ್ರ ವಾಹನಗಳ 5 ರೇಕ್‌ಗಳನ್ನು ಲೋಡ್ ಮಾಡಲಾಗಿದೆ. ಪ್ರತಿ ರೇಕ್‌ನಲ್ಲಿ ಸರಾಸರಿ 1000 ದ್ವಿಚಕ್ರ ವಾಹನಗಳನ್ನು ಸಾಗಿಸಲಾಗುತ್ತಿದೆ. ಮೈಸೂರು ವಿಭಾಗವು ಉತ್ತರ ಗಡಿನಾಡಿನ ರೈಲ್ವೆಯ ಚಂಗ್ಸಾರಿ, ಪಶ್ಚಿಮ ಬಂಗಾಳದ ಆಗ್ನೇಯ ರೈಲ್ವೆಯ ಸಂಕ್ರೈಲ್ ಗೂಡ್ಸ್ ಟರ್ಮಿನಲ್, ಉತ್ತರ ಪ್ರದೇಶದ ಈಶಾನ್ಯ ರೈಲ್ವೆಯ ನೌತರ್ವಾ ಮತ್ತು ಬಿಹಾರದ ಪೂರ್ವ ಮಧ್ಯ ರೈಲ್ವೆಯ ಸಾರೈ ಮತ್ತಿತರ ಕಡೆಗಳಿಗೆ ದ್ವಿಚಕ್ರ ವಾಹನಗಳನ್ನು ಸಾಗಿಸಲಾಗಿದೆ.
ಇದರ ಜತೆಗೆ ಮೈಸೂರು ವಿಭಾಗವು ಶುಂಠಿ, ಅಡಕೆ ಕಾಯಿ, ಮೆಣಸು ಮತ್ತು ಇತರ ಕೃಷಿ ಸರಕುಗಳನ್ನು ಲೋಡ್ ಮಾಡಿ ರೈತರು ತಮ್ಮ ಉತ್ಪನ್ನಗಳನ್ನು ಸಾಗಿಸಲು ಅನುಕೂಲ ಮಾಡಿಕೊಟ್ಟಿದೆ. ವಿಭಾಗದಿಂದ ಗೋವಾ ಮತ್ತು ರೋಹಾದಂತಹ ಸ್ಥಳಗಳಿಗೆ ಮೊದಲ ಬಾರಿಗೆ ಕಬ್ಬಿಣದ ಅದಿರನ್ನು ಲೋಡ್ ಮಾಡಿ ಕಳುಹಿಸಲಾಗಿದೆ.
ಮೈಸೂರು ವಿಭಾಗದ ಸರಕು ಸಾಗಣೆಯ ವಸ್ತುಗಳ ಪರಿಧಿಯನ್ನು ವಿಸ್ತರಿಸುವ ದೃಷ್ಟಿಯಿಂದ, ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್ ವಾಣಿಜ್ಯೀಕರಣವಾಗಿ ಪ್ರಮುಖ ಸ್ಥಳಗಳಾದ ಹಾಸನ, ಅರಸಿಕೆರೆ, ದಾವಣಗೆರೆ, ಸುಬ್ರಮಣ್ಯ ರೋಡ್ ಮತ್ತು ಶಿವಮೊಗ್ಗಕ್ಕಾಗಿ ಬಿಡಿಯು(ವ್ಯಾಪಾರ ಅಭಿವೃದ್ಧಿ ಘಟಕ)ನ ಐದು ಉಪ ವಿಭಾಗೀಯ ಘಟಕಗಳನ್ನು ರಚಿಸಿದ್ದಾರೆ. ಇದು ರೈಲ್ವೆಗೆ ಸ್ಥಳೀಯ ಮಾರುಕಟ್ಟೆಗಳನ್ನು ತಲುಪಲು ಸಹಾಯ ಮಾಡುತ್ತದೆ ಮತ್ತು ರೈತರು ಪರಿಣಾಮಕಾರಿಯಾಗಿ ವ್ಯಾಪಾರ ಮಾಡಲು ಇರುವ ಅನುಕೂಲಗಳನ್ನು ಹೆಚ್ಚಿಸುತ್ತದೆ.