ಹಾಸನ: ಮಂಗಳವಾರ ಸಂಜೆ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಬುಧವಾರ ಮಧ್ಯಾಹ್ನ ನಗರದ ಹೊರವಲಯದ ಬಸವನಹಳ್ಳಿ ಬಳಿ ಇರುವ ರೈಲ್ವೆ ಟ್ರ್ಯಾಕ್ ಸಮೀಪ ಪತ್ತೆಯಾಗಿದೆ.
ನಗರದ ಚಿಕ್ಕ ಹೊನ್ನೇನಹಳ್ಳಿ ಗ್ರಾಮದ ವೆಂಕಟೇಶ್ ಮತ್ತು ರೂಪಾ ದಂಪತಿಯ ಪುತ್ರ ಕುಶಾಲ್ ಗೌಡ (12) ಮೃತ ಬಾಲಕ. ಬಾಲಕನ ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಇದು ಕೊಲೆಯೂ ಅಥವಾ ಆತ್ಮಹತ್ಯೆಯೊ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ.
ಮಂಗಳವಾರ ಸಂಜೆ ಮಕ್ಕಳ ಜೊತೆ ಕಣ್ಣಾ ಮುಚ್ಚಾಲೆ ಆಟವಾಡುತ್ತಿದ್ದ ಬಾಲಕ ಬಚ್ಚಿಟ್ಟುಕೊಳ್ಳಲು ಹೋದವ ಕಣ್ಮೆರೆಯಾಗಿದ್ದ. ಎಷ್ಟೇ ಹುಡುಕಿದರೂ ಬಾಲಕ ಸಿಗದಿದ್ದಾಗ ಬಾಲಕನನ್ನು ಚಿರತೆ ಒತ್ತೊಯ್ದಿರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ತೀವ್ರ ಶೋಧ ಕಾರ್ಯ ನಡೆಸಲಾಯಿತು.
ಬುಧವಾರ ಮಧ್ಯಾಹ್ನದ ವೇಳೆಗೆ ಬಸವನಹಳ್ಳಿ ಬಳಿ ಇರುವ ರೈಲ್ವೆ ಹಳಿ ಹತ್ತಿರ ಬಾಲಕನ ಮೃತದೇಹ ಪತ್ತೆಯಾಗಿದೆ. ಬಾಲಕನನ್ನು ಕೊಲೆ ಮಾಡಿ ರೈಲ್ವೆ ಹಳಿ ಹತ್ತಿರ ಬಿಸಾಡಿ ಹೋಗಲಾಗಿದೆಯೋ ಅಥವಾ ಆತನೆ ಆಕಸ್ಮಿಕವಾಗಿ ರೈಲು ಹಳಿಗೆ ಸಿಲುಕಿರಬಹುದೇ? ಇಲ್ಲ ಆತ್ಮಹತ್ಯೆ ಮಾಡಿಕೊಂಡಿರಬಹುದೆ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಾಸನ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ ಈಗಾಗಲೇ ಸ್ಥಳದಲ್ಲಿ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ನಗರದ ಜಿಲ್ಲಾಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.