ಜಿಲ್ಲೆ

ರೈಲ್ವೆ ಸುರಕ್ಷಾ ದಳದಿಂದ ಆರೋಗ್ಯ ಕಾಳಜಿ

ಗದಗ: ಕರೊನಾ ವೈರಸ್ ಹಿನ್ನೆಲೆಯಲ್ಲಿ ಸ್ಥಳೀಯ ರೈಲ್ವೆ ಸುರಕ್ಷಾ ದಳದ (ಆರ್​ಪಿಎಫ್) ಸಿಬ್ಬಂದಿ ಹಾಗೂ ಅಧಿಕಾರಿಗಳು ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲು ವಿವಿಧ ರೀತಿಯ ಆಯುರ್ವೆದಿಕ ಕಷಾಯಗಳನ್ನು ಸ್ವಂತ ಹಣದಿಂದ ತಯಾರಿಸಿ ಉಚಿತವಾಗಿ ವಿತರಿಸುತ್ತಿದ್ದಾರೆ.

ನಗರದ ರೈಲು ನಿಲ್ದಾಣದಲ್ಲಿ ಆರ್​ಪಿಎಫ್ ಕಚೇರಿಯ ಮುಂದೆ ಟೇಬಲ್ ಮೇಲೆ ಕಷಾಯದ ಸ್ಟೀಲ್ ಕ್ಯಾನ್ ಇಟ್ಟುಕೊಂಡು ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ಕಳೆದ ನಾಲ್ಕು ತಿಂಗಳಿನಿಂದ ಬೆಳಗ್ಗೆ 6ರಿಂದ 9 ಗಂಟೆಯವರೆಗೆ ಈ ಕಷಾಯ ವಿತರಣೆ ಕಾರ್ಯ ನಡೆಯುತ್ತಿದೆ.

ಬೆಳಗ್ಗೆ 5 ಗಂಟೆಯಿಂದಲೇ ಕಷಾಯ ತಯಾರಿಸಲು ಆರಂಭಿಸಲಾಗುತ್ತಿದೆ. 6 ಗಂಟೆಯಿಂದ ವಿತರಣೆ ಕಾರ್ಯ ಶುರುವಾಗುತ್ತದೆ. ತುಳಸಿ, ಬಿಲ್ವಪತ್ರೆ, ಉತ್ತರಾಣಿ, ನೆಲನೆಲ್ಲಿ, ದಾಸವಾಳ, ಪಾರಿಜಾತ, ಹೊಂಗೆ, ಅಶ್ವಗಂಧ, ಅಮೃತಬಳ್ಳಿ, ಬೇವಿನ ಕಷಾಯ, ಅಶ್ವತ್ಥ ಮರದ ಎಲೆ, ಗರಿಕೆ, ಪೇರಲ ಎಲೆ ಕಷಾಯ ಸೇರಿ 36 ವಿವಿಧ ಬಗೆಯ ಕಷಾಯ ತಯಾರಿಸಿ ವಿತರಣೆ ಮಾಡಲಾಗುತ್ತಿದೆ. ನಾಲ್ಕು ದಿನಕ್ಕೊಮ್ಮೆ ಕಷಾಯ ಬದಲಿಸಲಾಗುತ್ತದೆ. ಆಯುರ್ವೆದ ಸಸ್ಯಗಳ ಎಲೆಗಳನ್ನು ಆಯ್ದು, ಸ್ವಚ್ಛಗೊಳಿಸಿ ನೀರಿನಲ್ಲಿ ಕುದಿಸಿ ಬೆಲ್ಲ, ನಿಂಬೆಹಣ್ಣಿನ ರಸ, ಕರಿಮೆಣಸು, ಅರಿಷಿಣ, ಉಪ್ಪು, ಜೇನುತುಪ್ಪ ಬೆರೆಸಿ ಕಷಾಯ ತಯಾರಿಸಲಾಗುತ್ತಿದೆ.

ನಿತ್ಯ ಆರ್​ಪಿಎಫ್ ಸಿಬ್ಬಂದಿ ಉತ್ಸಾಹದಿಂದ ಜನರಿಗೆ ಕಷಾಯ ವಿತರಿಸುತ್ತಿದ್ದಾರೆ. ಕಷಾಯ ಕುಡಿಯಲು ಬೆಳಗ್ಗೆ ನೂರಾರು ಜನ ಆಗಮಿಸುತ್ತಾರೆ.

ಸಿಬ್ಬಂದಿಯಿಂದಲೇ ತಯಾರಿ: ನೂರಾರು ಜನರಿಗೆ ವಿತರಿಸುವ ಕಷಾಯವನ್ನು ಸಿಬ್ಬಂದಿಯೇ ಕಚೇರಿ ಹಿಂಭಾಗದಲ್ಲಿರುವ ಕೋಣೆಯಲ್ಲಿ ತಯಾರಿಸುತ್ತಾರೆ. ಕಷಾಯ ಪುಡಿ ತಯಾರಿಕೆಗೆ ಅವಶ್ಯವಿರುವ ವಿವಿಧ ರೀತಿಯ ಆಯುರ್ವೆದೀಯ ಸಸ್ಯಗಳನ್ನು ಸಿಬ್ಬಂದಿ ವರ್ಗ ಕಚೇರಿಯ ಹಿಂಭಾಗದಲ್ಲಿ ಬೆಳೆಸಿದ್ದಾರೆ. ಅಗತ್ಯವಿರುವ ವಸ್ತುಗಳನ್ನು ಮಾರುಕಟ್ಟೆಯಿಂದ ಖರೀದಿಸುತ್ತಾರೆ.

ಪ್ರಯಾಣಿಕರು ಹಾಗೂ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಉಚಿತವಾಗಿ ಕಷಾಯ ವಿತರಿಸುತ್ತಿರುವುದು ಶ್ಲಾಘನೀಯ. ಸಾರ್ವಜನಿಕರ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಆರಂಭಿಸಿರುವ ಕಷಾಯ ವಿತರಣೆಯನ್ನು ಎಲ್ಲ ರೈಲು ನಿಲ್ದಾಣಗಳಲ್ಲಿ ಆರಂಭಿಸಿದರೆ ಎಲ್ಲರಿಗೂ ಪ್ರಯೋಜನವಾಗಲಿದೆ.| ಈಶ್ವರಪ್ಪ ಬೇವಿನಮರದ, ಉದ್ಯಮದಾರರು ಗದಗ
ಕರೊನಾ ನಿಯಂತ್ರಿಸಲು ಜನರು ಆಯುರ್ವೆದಿಕ ಔಷಧಗಳನ್ನು ಹೆಚ್ಚು ಬಳಸಬೇಕು ಎಂದು ಮಾರ್ಚ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದರು. ರೈಲ್ವೆ ಪ್ರಯಾಣಿಕರಿಗೆ ಕಷಾಯ ವಿತರಣೆ ಮಾಡಬೇಕು ಎಂದು ಯೋಚನೆ ಬಂದ ತಕ್ಷಣ ಕಾರ್ಯರೂಪಕ್ಕೆ ತರಲಾಯಿತು. ಸಮಾಜಪರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಬೆಂಬಲಿಸಿದ್ದಾರೆ. | ವಿ.ಎಚ್. ದಿವಾಕರ, ಪಿಎಸ್​ಐ, ಆರ್​ಪಿಎಫ್ ಗದಗ