ಮೈಸೂರು: ಮೈಸೂರು ರೈಲ್ವೆ ವಸ್ತುಸಂಗ್ರಹಾಲಯದಲ್ಲಿ ವಿಪತ್ತು ಮತ್ತು ಸಂಘರ್ಷ-ನಿರೋಧಕ ಪರಂಪರೆ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿ ವಿಶ್ವ ಪರಂಪರೆ ದಿನವನ್ನು ಶುಕ್ರವಾರ ಆಚರಿಸಲಾಯಿತು.
ಶಾಲಾ ಮಕ್ಕಳು ಉತ್ಸಾಹದಿಂದ ಈ ವರ್ಷದ ಥೀಮ್‌ಗೆ ಸಂಬಂಧಿಸಿದಂತೆ ಪೋಸ್ಟರ್ ತಯಾರಿಕೆ, ಚಿತ್ರಕಲೆ ಮತ್ತು ವರ್ಣಚಿತ್ರ ಸ್ಪರ್ಧೆಯಲ್ಲಿ ತೊಡಗಿದ್ದರು.
ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಮುದಿತ್ ಮಿತ್ತಲ್ ಮಾತನಾಡಿ, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಯುವಜನರ ಪಾತ್ರ ಮುಖ್ಯವಾಗಿದೆ. ವಿಪತ್ತುಗಳು ಮತ್ತು ಸಂಘರ್ಷಗಳನ್ನು ಎದುರಿಸಿ ಭವಿಷ್ಯದ ಪೀಳಿಗೆಗೆ ಉಳಿಯುವಂತೆ ಯುವ ಪೀಳಿಗೆಯು ಪರಂಪರೆ ಸಂರಕ್ಷಣೆಯ ಚಾಂಪಿಯನ್ ಆಗಬೇಕು ಎಂದು ಹೇಳಿದರು.
ಸ್ಪರ್ಧೆಯು ಐತಿಹಾಸಿಕ ಸ್ಥಳಗಳ ಅಡಾಪ್ಟಿವ್ ಮರುಬಳಕೆ, ಪರಂಪರೆ ರಚನೆಗಳಿಗೆ ವಿಪತ್ತು ಸಿದ್ಧತೆ, ಸಂರಕ್ಷಣೆಯಲ್ಲಿ ತಂತ್ರಜ್ಞಾನದ ಪಾತ್ರದಂತಹ ವಿಷಯಗಳ ಬಗ್ಗೆ ಉತ್ಸಾಹಭರಿತ ಚರ್ಚೆಗಳಿಗೆ ಕಾರಣವಾಯಿತು. ತಮ್ಮ ಜ್ಞಾನವನ್ನು ಪ್ರತಿಬಿಂಬಿಸುವ ಕಲಾಕೃತಿಗಳ ಮೂಲಕ ನವೀನ ಆಲೋಚನೆ ಪ್ರದರ್ಶಿಸಲಾಯಿತು.
ಕೈಯಿಂದ ರಚಿಸಲಾದ ಸ್ಟೀಮ್ ಇಂಜಿನ್ ಮಾದರಿಯ ಲೈವ್ ಪ್ರದರ್ಶನವು ಮೆಚ್ಚುಗೆ ಗಳಿಸಿತು. ಭಾರತದ ರೈಲ್ವೆ ಪರಂಪರೆಯ ಇಂಜಿನಿಯರಿಂಗ್ ಅದ್ಭುತಗಳ ಒಂದು ಝಲಕ್ ನೀಡಿತು. ಹಿರಿಯ ರೈಲ್ವೆ ಅಧಿಕಾರಿಗಳು, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮತ್ತು ಪರಂಪರೆ ಸಂರಕ್ಷಣೆ ತಜ್ಞರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವಿಂಟೇಜ್ ಲೊಕೊಮೊಟಿವ್‌ಗಳು ಮತ್ತು ಐತಿಹಾಸಿಕ ಪ್ರದರ್ಶನಗಳ ಸಂರಕ್ಷಣೆಗೆ ಹೆಸರಾದ ಮೈಸೂರು ರೈಲ್ವೆ ವಸ್ತುಸಂಗ್ರಹಾಲಯವು ಸಂವಾದಾತ್ಮಕ ಉಪಕ್ರಮಗಳ ಮೂಲಕ ರೈಲ್ವೆ ಪರಂಪರೆಯ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು. ಇಂದಿನ ಕಾರ್ಯಕ್ರಮವು ಸಾಂಸ್ಕೃತಿಕ ಮತ್ತು ಐತಿಹಾಸಿಕ ಸ್ವತ್ತುಗಳ ಸಂರಕ್ಷಣೆಯಲ್ಲಿ ಸಮುದಾಯದ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಎಸ್‌ಡಬ್ಲುೃಆರ್‌ನ ಸಮರ್ಪಣೆಯನ್ನು ಒತ್ತಿ ಹೇಳಿತು.
ವಿಶ್ವ ಪರಂಪರೆ ದಿನ ಆಚರಣೆಯ ಸಂದರ್ಭದಲ್ಲಿ ಮೈಸೂರು ರೈಲ್ವೆ ವಸ್ತುಸಂಗ್ರಹಾಲಯಕ್ಕೆ ಸಂದರ್ಶಕರಿಗೆ ಪ್ರವೇಶವನ್ನು ಉಚಿತವಾಗಿ ಬೀಡಲಾಯಿತು. ಅಂತೆಯೇ, ಮೈಸೂರು ರೈಲ್ವೆ ನಿಲ್ದಾಣದ ಪಿಎಫ್1ನಲ್ಲಿರುವ ಭಾರತೀಯ ರೈಲ್ವೆಯ ಅಪರೂಪದ ಛಾಯಾಚಿತ್ರಗಳೊಂದಿಗಿನ ಪರಂಪರೆ ಗ್ಯಾಲರಿಯು, ಮಿನಿಯೇಚರ್ ಟ್ರೈನ್‌ನೊಂದಿಗೆ ನಾಳೆ(ಏ.19) ಸಾರ್ವಜನಿಕರಿಗೆ ತೆರೆದಿರುತ್ತದೆ.