Oplus_16908288 
ಜಿಲ್ಲೆ

ರೈಲ್ವೆ ಮೇಲ್ಸೇತುವೆಗೆ ವಿ.ಶ್ರೀನಿವಾಸ ಪ್ರಸಾದ್ ಹೆಸರಿಡಿ

ನಂಜನಗೂಡು: ಪಟ್ಟಣದಲ್ಲಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇತುವೆಗೆ ಹೆಸರಿಡುವ ಸಂಬಂಧ ಹಲವು ದಿನಗಳಿಂದ ಸಾಕಷ್ಟು ಗೊಂದಲಗಳಿದ್ದವು, ಪ್ರಸ್ತುತ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದ್ದು, ಸ್ವಾಭಿಮಾನಿ ಚಕ್ರವರ್ತಿ ವಿ.ಶ್ರೀನಿವಾಸ ಪ್ರಸಾದ್ ಎಂದೇ ಹೆಸರಿಡಬೇಕು ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಸಲಹೆ ನೀಡಿದರು.

ಆಗಸ್ಟ್ 6ರಂದು ಮಾಜಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಹುಟ್ಟುಹಬ್ಬದ ಹಿನ್ನೆಲೆ, ಅಭಿಮಾನಿಗಳ ಬಳಗದ ವತಿಯಿಂದ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪ್ರಸಾದ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಇದು ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಸೇತುವೆ ನಿರ್ಮಾಣ ಮಾಡಲು ಭೂಮಿಪೂಜೆ ನೆರವೇರಿಸಿದವರು ಪ್ರಸಾದ್ ಅವರು. ಬೇಗ ಮುಗಿಯುವ ಕೆಲಸವನ್ನು ಕೆಲವರು ತಡೆಹಿಡಿದಿದ್ದರು. ಇದು ಕೇಂದ್ರ ಸರ್ಕಾರದ ಯೋಜನೆ. ಸೇತುವೆ ನಿರ್ಮಾಣ ಮಾಡಲು ಪ್ರಸಾದ್ ಅವರು ಸಾಕಷ್ಟು ಹೋರಾಟವನ್ನು ಮಾಡಿದ ಪರಿಣಾಮ ನಿರ್ಮಾಣವಾಯಿತು. ಆಗಸ್ಟ್ 6ರಂದು ನಂಜನಗೂಡಿನ ಜೆಎಸ್‌ಎಸ್ ಕಲ್ಯಾಣ ಮಂಟಪದಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸುತ್ತೂರು ಕ್ಷೇತ್ರದ ಶ್ರೀಗಳಾದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪ್ರಸಾದ್ ಅವರ ಪತ್ನಿ ಭಾಗ್ಯಾ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಪ್ರೊ. ಕಾಳೇಗೌಡ ನಾಗವಾರ, ಬಿಜೆಪಿ ನಾಯಕ ಶ್ರೀರಾಮುಲು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಹುಟ್ಟುಹಬ್ಬದ ದಿನವೇ ಸೇತುವೆಗೆ ನಾಮಕರಣ ಮಾಡಲಾಗುವುದು ಎಂದರು.

ಇದು ಪಕ್ಷದ ಕಾರ್ಯಕ್ರಮವಲ್ಲ, ಶ್ರೀನಿವಾಸ ಪ್ರಸಾದ್ ಅವರ ಅಭಿಮಾನಿಗಳ ಒಕ್ಕೂಟದ ಕಾರ್ಯಕ್ರಮವಾಗಿದೆ. ಅಭಿಮಾನಿಗಳಿಗೆ ಮಾಹಿತಿ ಸರಿಯಾದ ರೀತಿಯಲ್ಲಿ ತಲುಪಬೇಕು. ಪಕ್ಷಾತೀತವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದರು.

ಹಲವು ದಿನಗಳ ಹೋರಾಟದ ಫಲವಾಗಿ ನಮಗೆ ಜಯ ಸಿಕ್ಕಿದೆ. ಕಾಂಗ್ರೆಸ್ ಪಕ್ಷದವರು ಸೇತುವೆಗೆ ಶ್ರೀನಿವಾಸ್ ಪ್ರಸಾದ್ ಅವರ ಹೆಸರನ್ನೇ ಇಡುವಂತೆ ಹೇಳುತ್ತಿರುವುದು ಸ್ವಾಗತಾರ್ಹ ವಿಷಯ ಎಂದರು.

ಸಭೆಯಲ್ಲಿ ಚಿಕ್ಕರಂಗನಾಯಕ, ಕೆಂಡಗಣ್ಣಪ್ಪ, ಸಿದ್ದರಾಜು, ಮಹೇಶ್, ಕಣೆನೂರು ಪರಶಿವಮೂರ್ತಿ, ಸೋಮಪ್ಪ, ಹುಲ್ಲಹಳ್ಳಿ ವರದರಾಜ್, ಶಿವಣ್ಣ, ಪುಟ್ಟರಾಜು, ಬದನವಾಳು ರಾಮು, ಹುರ ಚಂದ್ರು, ಶ್ರೀನಿವಾಸ ಪ್ರಸಾದ್ ಅಭಿಮಾನಿಗಳ ಸಂಘದ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಹಾಜರಿದ್ದರು.