ಜಿಲ್ಲೆ

ರೈಲ್ವೆ ಮಾರ್ಗದಿಂದ ಭದ್ರಾವತಿಯಲ್ಲಿ ಬದಲಾಣೆ

ಭದ್ರಾವತಿ: ಭದ್ರಾವತಿಯಿಂದ ಚನ್ನಗಿರಿ ಮಾರ್ಗವಾಗಿ ಚಿಕ್ಕಜಾಜೂರಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗದ ಸಮೀಕ್ಷೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿರುವುದು ಕ್ಷೇತ್ರದ ನಾಗರಿಕರಲ್ಲಿ ಹಾಗೂ ಕಾರ್ಮಿಕ ವಲಯದಲ್ಲಿ ಸಂತಸದ ಜತೆಗೆ ಕಾರ್ಖಾನೆಗಳು ಅಭಿವೃದ್ಧಿಯಾಗುವ ಆಶಾಭಾವನೆ ಗರಿಗೆದರಿದೆ. ಭದ್ರಾವತಿ ನಗರದಿಂದ ಚಿಕ್ಕಜಾಜೂರು ಜಂಕ್ಷನ್‌ಗೆ ನೂತನ ರೈಲ್ವೆ ಮಾರ್ಗ ನಿರ್ಮಿಸುವ ಸಂಬಂಧ ಸಮೀಕ್ಷೆ ನಡೆಸಲು 1.82 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಸಮೀಕ್ಷೆ ಪೂರ್ಣಗೊಂಡಲ್ಲಿ ಉದ್ದೇಶಿತ ಮಾರ್ಗದಲ್ಲಿ ಹೊಸ ರೈಲುಗಳು ಸಂಚರದ ಕನಸು ನನಸಾಗುವತ್ತ ದಾಪುಗಾಲಿಡಲಿದೆ. ಹಲವು ಜಿಲ್ಲೆ ಹಾಗೂ ರಾಜ್ಯಗಳ ನಡುವೆ ವ್ಯಾಪಾರ, ವಾಣಿಜ್ಯ ವಹಿವಾಟುಗಳ ಕೊಂಡಿಯಾಗಿ ಬೆಸೆದುಕೊಳ್ಳಲಿದೆ. ಅದರೊಟ್ಟಿಗೆ ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆ ಜನರ ರೈಲ್ವೆ ಸಂಚಾರವೂ ಸುಗಮವಾಗಲಿದೆ. ಇದರಿಂದ ಪ್ರಯಾಣದ ವೆಚ್ಚ ಹಾಗೂ ಸಮಯವೂ ಉಳಿತಾಯವಾಗಲಿದೆ. ಕೈಗಾರಿಕೆ ಪುನಶ್ಚೇತನಕ್ಕೆ ದಾರಿ: ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ನಗರದ ಪ್ರತಿಷ್ಠಿತ ವಿಐಎಸ್‌ಎಲ್ ಕಾರ್ಖಾನೆ ಹಾಗೂ ರಾಜ್ಯದ ಅಧೀನದಲ್ಲಿರುವ ಎಂಪಿಎಂ ಕಾರ್ಖಾನೆಗಳು ಪ್ರಸ್ತುತ ಸರಕು ಸಾಮಗ್ರಿ ಹಾಗೂ ಕಚ್ಚಾ ವಸ್ತುಗಳ ಸರಬರಾಜು ವ್ಯತ್ಯಾಸಗಳಿಂದಾಗಿ ನಷ್ಟ ಅನುಭವಿಸಿ ಮುಚ್ಚುವ ಹಂತ ತಲುಪಿವೆ. ಇದೀಗ ಹೊಸ ರೈಲ್ವೆ ಸಂಪರ್ಕ ಮಾರ್ಗದ ಫಲವಾಗಿ ಕಾರ್ಖಾನೆಗಳು ಪುನಶ್ಚೇತನಗೊಳ್ಳುವ ಭರವಸೆ ವ್ಯಕ್ತವಾಗುತ್ತಿದೆ. ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನಗೊಳಿಸಲು ಎಲ್ಲ ರೀತಿಯ ಪ್ರಯತ್ನ ಆರಂಭಿಸಿದ್ದಾರೆ ಸಂಸದ ಬಿ.ವೈ.ರಾಘವೇಂದ್ರ. ಇದುವರೆಗೆ ಕಚ್ಚಾವಸ್ತುಗಳನ್ನು ಬೇರೆ ರಾಜ್ಯಗಳಿಂದ ರಸ್ತೆ ಸಂಪರ್ಕದ ಮೂಲಕ ಕಾರ್ಖಾನೆಗೆ ತರಿಸಿಕೊಂಡು ನಿರಂತರ ಉತ್ಪಾದಕತೆ ಕಾಪಾಡಿಕೊಂಡು ಬಂದಿದ್ದು ಕಾರ್ಮಿಕರಿಗೆ 20 ದಿನಗಳವರೆಗೂ ನಿರಂತರ ಕೆಲಸ ನೀಡುವ ಪ್ರಯತ್ನ ಯಶಸ್ವಿಯಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರದಿಂದ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ್ ಈಗಾಗಲೆ ಕಾರ್ಖಾನೆಗೆ ಬಳ್ಳಾರಿ ಜಿಲ್ಲೆಯ ರಮಣದುರ್ಗದಲ್ಲಿ 150 ಎಕರೆ ಗಣಿ ಭೂಪ್ರದೇಶ ಮಂಜೂರು ಮಾಡಿಸಿದ್ದು ಗಣಿ ಆರಂಭವಾಗುವುದು ಮಾತ್ರ ಬಾಕಿ ಉಳಿದಿದೆ. ಈಗಾಗಲೆ ಪರಿಸರ ಇಲಾಖೆ ಒಪ್ಪಿಗೆ ನೀಡಿದ್ದು ಅರಣ್ಯ ಇಲಾಖೆಯ ಅನುಮತಿ ಮಾತ್ರ ಬಾಕಿ ಉಳಿದಿದೆ. ಅದು ಯಶಸ್ವಿಯಾದಲ್ಲಿ ಗಣಿ ಉತ್ಪಾದನೆ ಸುಲಭವಾಗಲಿದೆ. ಕೇಂದ್ರದ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಒಂದು ವರ್ಷದ ಹಿಂದೆ ಸ್ವತಃ ಕಾರ್ಖಾನೆಗೆ ಭೇಟಿ ನೀಡಿ ಅಗತ್ಯವಿರುವ 15 ಸಾವಿರ ಕೋಟಿ ರೂ. ಬಂಡವಾಳ ನೀಡುವ ಭರವಸೆ ನೀಡಿದ್ದರು. ಅದು ಇದುವರೆಗೂ ಕೈಗೂಡಿಲ್ಲ. ಇದೀಗ ಬಂಡವಾಳ ತೊಡಗಿಸುವ ಅವರ ಪ್ರಯತ್ನ ಹೆಚ್ಚಾದರೆ ಕಾರ್ಖಾನೆ ಪುನಶ್ಚೇತನಗೊಳ್ಳುವ ಮೂಲಕ ದೇಶದ ಆರ್ಥಿಕತೆಗೂ ಅನುಕೂಲವಾಗಲಿದೆ. ಕ್ಷೇತ್ರದಲ್ಲಿ ಯುವಕರಿಗೆ ಉದ್ಯೋಗಾವಕಾಶಗಳೂ ಹೆಚ್ಚುತ್ತವೆ. ಕಾರ್ಮಿಕ ಕುಟುಂಬಗಳು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಸಮಯ ಹಾಗೂ ಹಣ ಉಳಿತಾಯ: ಸಂಡೂರು ತಾಲೂಕು ರಮಣದುರ್ಗದಲ್ಲಿ ಅದಿರು ಉತ್ಪಾದನೆ ಆರಂಭವಾದರೆ ಅದಿರು ಸರಬರಾಜು ಬಳ್ಳಾರಿ, ಹೊಸಪೇಟೆ, ಚಿತ್ರದುರ್ಗ, ಚಿಕ್ಕಜಾಜೂರು, ಬೀರೂರು ಮಾರ್ಗವಾಗಿ ಭದ್ರಾವತಿ ಕಾರ್ಖಾನೆಗೆ ತಲುಪಬೇಕಾಗಿತ್ತು. ಆದರೆ ಚನ್ನಗಿರಿ ಮಾರ್ಗವಾಗಿ ರೈಲು ಸಂಚಾರ ಆರಂಭವಾದಲ್ಲಿ ಗೂಡ್ಸ್ ರೈಲುಗಳು ಚಿಕ್ಕಜಾಜೂರು, ಚನ್ನಗಿರಿ ಮಾರ್ಗವಾಗಿ ಕಾರ್ಖಾನೆ ತಲುಪುವುದರಿಂದ ಸುಮಾರು 100 ಕಿ.ಮೀ. ಉಳಿತಾಯವಾಗುತ್ತದೆ. ಅಲ್ಲದೆ ಬೀರೂರು ಮಾರ್ಗ ಅತಿಹೆಚ್ಚು ರೈಲುಗಳ ಓಡಾಟದಿಂದ ಕೂಡಿದ್ದು ಅದಿರು, ಕಚ್ಚಾವಸ್ತುಗಳು ಕಾರ್ಖಾನೆ ತಲುಪಲು ಸಮಯ ಹಾಗೂ ಹಣ ಹೆಚ್ಚು ಖರ್ಚಾಗುತ್ತದೆ. ಚನ್ನಗಿರಿ ಮೂಲಕವಾದರೆ ಸಮಯ ಹಾಗೂ ಹಣ ಎರಡೂ ಉಳಿತಾಯವಾಗುತ್ತದೆ.

ಭದ್ರಾವತಿ ಚಿಕ್ಕಜಾಜೂರು ನಡುವಿನ ರೈಲ್ವೆ ಮಾರ್ಗ ವಿಐಎಸ್‌ಎಲ್ ಕಾರ್ಖಾನೆಗೆ ಅನುಕೂಲವಾಗಲಿದೆ. ರಾಜ್ಯ ಸರ್ಕಾರ ರಮಣದುರ್ಗದಲ್ಲಿ ಈಗಾಗಲೇ 150 ಎಕರೆ ಗಣಿ ಮಂಜೂರು ಮಾಡಿದೆ. ಗಣಿ ಉತ್ಪಾದಕತೆಗೆ ಅಗತ್ಯವಿರುವ ಎಲ್ಲ ಪೂರಕ ವ್ಯವಸ್ಥೆಗಳನ್ನು ರಾಜ್ಯ ಸರ್ಕಾರ ಮಾಡುತ್ತದೆ. ಬಿ.ಕೆ.ಸಂಗಮೇಶ್ವರ್ ಶಾಸಕ ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆಗಳು ಹಾಗೂ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಭದ್ರಾವತಿ -ಚಿಕ್ಕಜಾಜೂರು ನೇರ ರೈಲು ಸಂಪರ್ಕ ಕಲ್ಪಿಸಲು ಪ್ರಯತ್ನಿಸಿದ್ದರು. ಪ್ರಯತ್ನ ಇಂದು ಫಲ ನೀಡಿದೆ. ಮಲೆನಾಡು ಹಾಗೂ ಬಯಲು ಸೀಮೆಯ ಸಂಪರ್ಕ, ವ್ಯಾಪಾರ, ವಾಣಿಜ್ಯೋದ್ಯಮಗಳ ಬೆಳೆವಣಿಗೆಗೂ ಇದು ಪೂರಕ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವರು, ಸಂಸದರಿಗೆ ಅಭಿನಂದಿಸುತ್ತೇನೆ. ಮಂಗೋಟೆ ರುದ್ರೇಶ್ ಬಿಜೆಪಿ ಮುಖಂಡ ರಮಣದುರ್ಗದಲ್ಲಿ ಗಣಿ ಉತ್ಪಾದನೆ ಆರಂಭವಾದಲ್ಲಿ ವಿಐಎಸ್‌ಎಲ್ ಕಾರ್ಖಾನೆಗೆ ಗಣಿ ಅದಿರು ಸೇರಿದಂತೆ ಕಚ್ಚಾವಸ್ತುಗಳನ್ನು ಸುಲಭವಾಗಿ ಸರಬರಾಜು ಮಾಡಲು ಭದ್ರಾವತಿ-ಚಿಕ್ಕಜಾಜೂರು ರೈಲ್ವೆ ಮಾರ್ಗ ಅನುಕೂಲವಾಗಲಿದೆ. ಗಣಿ ಉತ್ಪಾದನೆ ಆರಂಭವಾಗಲು ಶಾಸಕರು, ಸಂಸದರು, ಕೇಂದ್ರ ಸಚಿವರು ಮತ್ತಷ್ಟು ಪ್ರಯತ್ನ ಮಾಡಬೇಕು. ಜೆ.ಜಗದೀಶ್ ವಿಐಎಸ್‌ಎಲ್ ಕಾರ್ಮಿಕ ಸಂಘದ ಮುಖಂಡ