ಜಿಲ್ಲೆ

ರೈಲ್ವೆ ನೌಕರಿ ಕೊಡಿಸುತ್ತೇನೆಂದು 1.21 ಕೋಟಿ ರೂ. ವಂಚನೆ

ಕಲಬುರಗಿ: ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುತ್ತೇನೆ ಎಂದು ಹೇಳಿ ೩೩ ಜನರಿಂದ ೧.೨೧ ಕೋಟಿ ರೂ. ವಸೂಲಿ ಮಾಡಿ, ವಂಚನೆ ಮಾಡಿರುವ ಘಟನೆ ನಡೆದಿದೆ. ವಾಡಿಯ ಭೀಮನಗರದ ನಿವಾಸಿ ಚಂದ್ರಸೇನ್ ಮೆನಗಾರ್ ದೂರು ನೀಡಿದವರು.

ಘಟನೆ: ರೈಲ್ವೆ ಇಲಾಖೆಯಿಂದ ಅಮಾನತ್ತಾದ ಇಜಾಜ್ ಖಾನ್, ಆತನ ಸ್ನೇಹಿತ ರವಿ, ಪುತ್ರಿ ಮುಸ್ಕಾನ ಖಾನಂ, ಅಳಿಯಂದಿರಾದ ಮುನೀರ್ ಖಾನ್, ಸೊಯೇಬ್ ಖಾನ್ ಹಾಗೂ ರೈಲ್ವೆ ಅಧಿಕಾರಿ ಪಿ.ಪ್ರಸಾದರಾವ ವಿರುದ್ಧ ದೂರು ದಾಖಲಾಗಿದೆ. ಎಲ್ಲ ಆರೋಪಿಗಳು ಕೂಡಿಕೊಂಡು ನೌಕರಿ ಕೊಡಿಸುತ್ತೇನೆ ಎಂದು ಹೇಳಿ ದೂರುದಾರ ಚಂದ್ರಸೇನ್ ಮೆನಗಾರ್ ಮೂಲಕ ಒಟ್ಟು ೩೩ ಜನರಿಂದ ೧.೨೧ ಕೋಟಿ ರೂ. ಪಡೆದುಕೊಂಡಿದ್ದಾರೆ. ಮೆಡಿಕಲ್ ಪರೀಕ್ಷೆ ಇದೆ ಎಂದು ಸಿಕಂದರಾಬಾದ್‌ಗೆ ಕರೆದುಕೊಂಡು ಹೋಗಿ, ಪರೀಕ್ಷೆ ಕ್ಯಾನ್ಸಲ್ ಆಗಿದೆ ಎಂದು ಮರಳಿಸಿದ್ದಾರೆ. ಈ ವೇಳೆ ಪ್ರಮುಖ ಆರೋಪಿ ಇಜಾಜ್ ಖಾನ್ ರೈಲ್ವೆ ಅಧಿಕಾರಿ ಪಿ.ಪ್ರಸಾದರಾವ್‌ಗೆ ಕರೆ ಮಾಡಿದ್ದು, ಆತನ ಈ ಕೆಲಸ ಮಾಡಲು ಆಗುವುದಿಲ್ಲ. ಅವರ ಹಣ ವಾಪಸ್ ನೀಡುತ್ತೇನೆ ಎಂದು ಹೇಳಿದ್ದಾನೆ. ನಂತರ ಕುವೆಂಪು ನಗರದಲ್ಲಿನ ಏಷಿಯನ್ ಮಾಲ್‌ನಲ್ಲಿರುವ ಇಜಾಜ್‌ಖಾನ್‌ನ ಮನೆಗೆ ಹೋಗಿ ಕೇಳಿದಾಗ ನಿಮ್ಮ ಹಣ ನೀಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಿದ್ದು, ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.