ಪಾಂಡವಪುರ: ಇಲ್ಲಿನ ರೈಲ್ವೆ ನಿಲ್ದಾಣ ವೃತ್ತಕ್ಕೆ ಪಿಎಸ್‌ಎಸ್‌ಕೆ (ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ) ಸಂಸ್ಥಾಪಕ ಹಾಗೂ ಮಾಜಿ ಶಾಸಕ ಬಿ.ವೈ.ನಿಲೇಗೌಡರ ಹೆಸರನ್ನು ನಾಮಕರಣ ಮಾಡಬೇಕು ಎಂದು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ತಾಲೂಕು ಘಟಕದ ಪದಾಧಿಕಾರಿಗಳು ತಾಲೂಕು ಪಂಚಾಯಿತಿ ಕಚೇರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಬಳಿಕ ಟ್ರಸ್ಟ್‌ನ ಅಧ್ಯಕ್ಷ ಹಾರೋಹಳ್ಳಿ ಎಚ್.ಆರ್.ಧನ್ಯಕುಮಾರ್ ಮಾತನಾಡಿ, ಸಹಕಾರ ಧುರೀಣ ಬಿ.ವೈ.ನಿಲೇಗೌಡ ಪರಿಶ್ರಮದಿಂದ ಪಿಎಸ್‌ಎಸ್‌ಕೆ ಕಾರ್ಖಾನೆ ಸ್ಥಾಪನೆಗೊಂಡು ರಾಜ್ಯದಲ್ಲಿಯೇ ಅತ್ಯುತ್ತಮ ಕಾರ್ಖಾನೆ ಎಂಬ ಪ್ರಸಿದ್ಧಿ ಗಳಿಸಿತ್ತು. ಪಾಂಡವಪುರ ವಿಧಾನಸಭಾ ಕ್ಷೇತ್ರದ ಪ್ರಥಮ ಶಾಸಕರಾಗಿ, ಸಹಕಾರಿ ಧುರೀಣರಾಗಿ ಹಾಗೂ ರಾಜಕೀಯ ಮುತ್ಸದ್ದಿಯಾಗಿ ಸಲ್ಲಿಸಿದ್ದ ಅವರ ಸೇವೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ ಶ್ರೀರಂಗಪಟ್ಟಣ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯ ರೈಲ್ವೆ ನಿಲ್ದಾಣದ ವೃತ್ತಕ್ಕೆ ಬಿ.ವೈ.ನಿಲೇಗೌಡ ಹೆಸರನ್ನು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮೊದಲು ರೈಲ್ವೆ ನಿಲ್ದಾಣ ವೃತ್ತ ಕೆನ್ನಾಳು ಗ್ರಾಪಂ ವ್ಯಾಪ್ತಿಗೆ ಬರುವ ಕಾರಣ ಅಧ್ಯಕ್ಷ ವಿ.ಪ್ರಕಾಶ್ ಅವರಿಗೂ ಮನವಿ ಸಲ್ಲಿಸಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ವಿಚಾರ ಮಂಡಿಸಿ ವೃತ್ತಕ್ಕೆ ನಿಲೇಗೌಡರ ಹೆಸರು ನಾಮಕರಣ ಮಾಡಲು ನಿರ್ಣಯ ಅಂಗೀಕರಿಸುವಂತೆ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಗ್ರಾಪಂ ಅಧ್ಯಕ್ಷ, ಜು.29ರಂದು ಸಾಮಾನ್ಯ ಸಭೆ ಕರೆಯಲಾಗಿದ್ದು ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿ ಅಂಗೀಕಾರ ಪಡೆಯಲು ಪ್ರಯತ್ನಿಸುವುದಾಗಿ ತಿಳಿಸಿದರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಎಸ್.ಮಲ್ಲಿಕಾರ್ಜುನೇಗೌಡ, ಖಜಾಂಚಿ ಸ್ವಾಮಿಗೌಡ, ಪದಾಧಿಕಾರಿಗಳಾದ ಕೋ.ಪು.ಗುಣಶೇಖರ್, ಬಿ.ಎಸ್.ಜಯರಾಮು, ಸಾಹಿತಿ ಚಂದ್ರಶೇಖರಯ್ಯ, ಕೆ.ಕುಬೇರ, ಎಂ.ರಾಜೀವ್, ಹಾರೋಹಳ್ಳಿ ಜನಾರ್ದನ್ ಇತರರು ಇದ್ದರು.