ಜಿಲ್ಲೆ

ರೈಲ್ವೆ ಡಬ್ಲಿಂಗ್ ಅನುಮೋದನೆಯ ಭರವಸೆ

ಚಿತ್ರದುರ್ಗ: ಚಿಕ್ಕಜಾಜೂರು-ಚಿತ್ರದುರ್ಗ-ಚಳ್ಳಕೆರೆ-ಬಳ್ಳಾರಿವರೆಗೂ 3,341 ಕೋಟಿ ರೂ. ವೆಚ್ಚದಲ್ಲಿ 185 ಕಿ.ಮೀ ಉದ್ದದ ರೈಲ್ವೆ ಮಾರ್ಗವನ್ನು ದ್ವಿಪಥವಾಗಿ (ಡಬ್ಲಿಂಗ್) ನಿರ್ಮಿಸಲು ರೈಲ್ವೆ ಮಂಡಳಿಗೆ ಸಲ್ಲಿಸಿರುವ ಪ್ರಸ್ತಾವನೆಗೆ ರೈಲ್ವೆ ಸಚಿವರಿಂದ ಅನುಮೋದನೆ ಕೊಡಿಸುವುದಾಗಿ ಸಂಸದ ಗೋವಿಂದ ಎಂ ಕಾರಜೋಳ ಭರವಸೆ ನೀಡಿದರು.

ಬೆಂಗಳೂರಿನಲ್ಲಿ ನೈರುತ್ಯ ರೈಲ್ವೆ ವಲಯದ ಮುಖ್ಯ ಆಡಳಿತಾಧಿಕಾರಿ, ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದರು.

ಮಾರ್ಗದಲ್ಲಿ 174 ಹೆಕ್ಟೇರ್ ಭೂಸ್ವಾಧೀನದ ಅಗತ್ಯವಿದೆ. ಚಿತ್ರದುರ್ಗ ಲೋಸಕಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಿತ್ರದುರ್ಗ ತಾಲೂಕು, ಅಮೃತಾಪುರ ರೈಲ್ವೆ ನಿಲ್ದಾಣವೂ ಹೊಸದಾಗಿ ನಿರ್ಮಾಣವಾಗಲಿವೆ. ಈ ಮಾರ್ಗದಲ್ಲಿ 29 ಪ್ರಮುಖ, 230 ಸಣ್ಣ ಸೇತುವೆಗಳು, 12 ಲೆವೆಲ್ ಕ್ರಾಸಿಂಗ್‌ಗಳನ್ನು ನಿರ್ಮಿಸಲಾಗುವುದು. ಈ ಯೋಜನೆಯನ್ನು 4 ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶವನ್ನು ರೈಲ್ವೆ ಇಲಾಖೆ ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ದಾವಣಗೆರೆ-ಚಿತ್ರದುರ್ಗ-ತುಮಕೂರು ಹೊಸ ರೈಲು ಮಾರ್ಗದಲ್ಲಿ ಭರಮಸಾಗರದಿಂದ ಚಿತ್ರದುರ್ಗದವರೆಗಿನ 29 ಕಿ.ಮೀ ರೈಲ್ವೆ ಮಾರ್ಗ ನಿರ್ಮಾಣಕ್ಕಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ನೈರುತ್ಯ ರೈಲ್ವೆ (ಕಟ್ಟಡ) ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮ ಸಂಸದರಿಗೆ ಮಾಹಿತಿ ನೀಡಿದರು.

ಈ ಮಾರ್ಗದಲ್ಲಿ ಭೂಸ್ವಾಧೀನ ಪಡಿಸಿಕೊಂಡಿರುವ ಜಾಗದಲ್ಲಿ ಅಡಿಕೆ ಹಾಗೂ ಮೆಕ್ಕೆಜೋಳದ ಬೆಳೆಗಳು ಕಟಾವಿಗೆ ಬಂದಿದ್ದು, ಆ ಬೆಳಗಳನ್ನು ರೈತರು ಪಡೆದ ನಂತರ ಕಾಮಗಾರಿ ಆರಂಭಿಸಿ ಎಂದು ಸಂಸದರು ಅಧಿಕಾರಿಗಳಿಗೆ ಸೂಚಿಸಿದರು. ಈ ಭಾಗದಲ್ಲಿ ಇನ್ನೂ ಶೇ. 10ರಷ್ಟು ಭೂಸ್ವಾಧೀನ ಬಾಕಿ ಇದ್ದು, ತ್ವರಿತವಾಗಿ ಪೂರ್ಣಗೊಳಿಸಿ ಎಂದರು.

ಚಿತ್ರದುರ್ಗದಿಂದ ಹಿರಿಯೂರುವರೆಗೂ 45 ಕಿ.ಮೀ ಮಾರ್ಗದಲ್ಲಿ ಶೇ. 78ರಷ್ಟು ಭೂಸ್ವಾಧೀನವಾಗಿದ್ದು, ಶೇ. 90ರಷ್ಟು ಭೂಸ್ವಾಧೀನವಾದ ನಂತರ ಟೆಂಡರ್ ಕರೆಯಲಾಗುವುದು. ಪಾವಗಡ-ಮಡಕಶಿರಾ 22 ಕಿ.ಮೀ ಉದ್ದದ ಹೊಸ ರೈಲು ಮಾರ್ಗಕ್ಕಾಗಿ ಟೆಂಡರ್ ಕರೆದಿದ್ದು, ಸೆ. 11ರಂದು ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಚಿತ್ರದುರ್ಗ ವ್ಯಾಪ್ತಿಯ ಗೋನೂರು, ಹಿರೇಗುಂಟನೂರು, ಸಿದ್ದಾಪುರ, ಬೆಟ್ಟದ ನಾಗೇನಹಳ್ಳಿ, ಕುರುಬರಹಳ್ಳಿ ಹಾಗೂ ಚಳ್ಳಕೆರೆ ತಾಲೂಕಿನ ನಗರಂಗೆರೆ, ಸೋಮಗುದ್ದು ಬಳಿ ನಿರ್ಮಾಣವಾಗಿರುವ ಕೆಳಸೇತುವೆಗಳು ಅವೈಜ್ಞಾನಿಕವಾಗಿದ್ದು, ಮಳೆಗಾಲದಲ್ಲಿ ಸೇತುವೆಗಳು ಜಲಾವ್ರತಗೊಂಡು ವಾಹನಗಳು ಸಂಚರಿಸುವುದೇ ದುಸ್ಥರವಾಗಿದೆ. ಇವುಗಳನ್ನು ಶೀಘ್ರವೇ ಸರಿಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಚಿತ್ರದುರ್ಗ ನಗರದಲ್ಲಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ನಿರ್ಮಿಸುತ್ತಿರುವ ಹೊಸ ರೈಲ್ವೆ ನಿಲ್ದಾಣ 2025ರ ಮೇ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಪ್ರವೇಶ ಕಲ್ಪಿಸುವ 300 ಮೀಟರ್ ಉದ್ದದ ರಸ್ತೆಯನ್ನು ಸಿ.ಸಿ.ರಸ್ತೆಯನ್ನಾಗಿ ಮಾಡಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಚಳ್ಳಕೆರೆಯ ರಿಸರ್ವೇಷನ್ ಕೌಂಟರ್ ಅನ್ನು ಪುನಾ ತೆರೆಯಿರಿ. ಪ್ರಯಾಣಿಕರ ಅನುಕೂಲಕ್ಕಾಗಿ ಹೊಳಲ್ಕೆರೆ, ರಾಮಗಿರಿ, ಚಳ್ಳಕೆರೆ, ಮೊಳಕಾಲ್ಮೂರು, ಅಮೃತಾಪುರ ರೈಲ್ವೆ ನಿಲ್ದಾಣಗಳಲ್ಲಿ ಪ್ರಮುಖ ರೈಲುಗಳಿಗೆ ನಿಲುಗಡೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗುಂತಕಲ್ಲು-ಚಿಕ್ಕಜಾಜೂರುವರೆಗೆ ಸಂಚರಿಸುವ ರೈಲನ್ನು ಹುಬ್ಬಳ್ಳಿವರೆಗೆ, ಅಲ್ಲಿಂದ ಚಿಕ್ಕಜಾಜೂರುವರೆಗೆ ಸಂಚರಿಸುವ ರೈಲನ್ನು ಚಿತ್ರದುರ್ಗದವರೆಗೆ ವಿಸ್ತರಿಸಲು ಕ್ರಮ ಕೈಗೊಳ್ಳಿ. ಈಗಾಗಲೇ ರೈಲ್ವೆ ಇಲಾಖೆ ಪಿಎಂ ನರೇಂದ್ರಮೋದಿ ಅವರ ಯೋಜನೆಗಳಿಂದಾಗಿ ಪ್ರಯಾಣಿಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿಸಲು ಮುಂದಾಗಿ ಎಂದು ಸಲಹೆ ನೀಡಿದರು.

ಮೈಸೂರು ವಿಭಾಗದ ಸಹಾಯಕ ರೈಲ್ವೆ ವಿಭಾಗೀಯ ಅಧಿಕಾರಿ ವಿಜಯಾ, ಮುಖ್ಯ ಇಂಜಿನಿಯರ್‌ಗಳಾದ ಪರದೀಪ್ ಪುರಿ, ವೆಂಕಟೇಶ್ವರಲು, ರೋಹನ್ ಡೋಂಗ್ರೆ, ಡೆಪ್ಯುಟಿ ಚೀಫ್ ಇಂಜಿನಿಯರ್ ರಜತ್ ಇತರರಿದ್ದರು.