ಜಿಲ್ಲೆ

ರೈಲ್ವೆ ಕಾಮಗಾರಿಗೆ 5,070 ಕೋಟಿ ರೂಪಾಯಿ

ತುಮಕೂರು ರಾಯದುರ್ಗ ಮಾರ್ಗಕ್ಕೆ ಹಣ ಮಂಜೂರು, ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಮಾಹಿತಿ

ತಿಪಟೂರು: ರೈಲ್ವೆ ಎಂದರೆ ಭಾರತದ ವಿಕಾಸದ ಇಂಜಿನ್​ ಎಂಬ ದೊಡ್ಡ ಸಂದೇಶ ನೀಡಿರುವ ಪ್ರಧಾನಿ ಮೋದಿ, 2047ಕ್ಕೆ ವಿಕಸಿತ ಭಾರತ ಸಂಕಲ್ಪದೊಂದಿಗೆ ರಾಷ್ಟ್ರಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಬಣ್ಣಿಸಿದರು.

ತಾಲೂಕಿನ ಅರಳಗುಪ್ಪೆ ಗ್ರಾಮದಲ್ಲಿ ಶನಿವಾರ ರೈಲು ನಿಲ್ದಾಣದಲ್ಲಿ ಚಿಕ್ಕಮಗಳೂರು&-ಬೆಂಗಳೂರು ಸಾಮಾನ್ಯ ಎಕ್ಸ್​ಪ್ರೆಸ್​ ರೈಲಿಗೆ ನಿಲುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಭಾಗದ ಜನರ 10 ವರ್ಷಗಳ ಬೇಡಿಕೆ ಈಡೇರಿಸಿದ್ದೇನೆ. ಸುರಕ್ಷಿತ ರೈಲ್ವೆ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅಸಾಧ್ಯವೆಂದೇ ಪರಿಗಣಿಸಲಾಗಿದ್ದ ತುಮಕೂರು-&ದಾವಣಗೆರೆ ಮತ್ತು ತುಮಕೂರು ರಾಯದುರ್ಗ ರೈಲ್ವೆ ಕಾಮಗಾರಿಗೆ 5,070 ಕೋಟಿ ರೂ. ಮಂಜೂರಾಗಿದ್ದು, ಟೆಂಡರ್​ ಕರೆಯಲಾಗಿದೆ. ಆಧುನಿಕ ಸೌಲಭ್ಯ ನೀಡಲು ತಿಪಟೂರು ನಗರದ ರೈಲ್ವೆ ನಿಲ್ದಾಣವನ್ನು 23 ಕೊಟಿ ರೂ. ವೆಚ್ಚದಲ್ಲಿ ಮತ್ತು ಗುಬ್ಬಿ ರೈಲ್ವೆ ನಿಲ್ದಾಣವನ್ನು 16,6 ಕೋಟಿ ರೂ. ವೆಚ್ಚದಲ್ಲಿ ಅಮೃತ್​ ಭಾರತ್​ ಯೋಜನೆಯಡಿ ನವೀಕರಿಸಲಾಗುತ್ತಿದೆ. ತಿಪಟೂರಿನ ಹಾಸನ ವೃತ್ತ ಮತ್ತು ಬಿದರೇಗುಡಿ ಸಮೀಪದ ಹೊನ್ನವಳ್ಳಿ ರಸ್ತೆಯಲ್ಲಿ ಆರ್​ಒಬಿ ಕಾಮಗಾರಿಗೆ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

ಅರಳಗುಪ್ಪೆಯಲ್ಲಿ ರೈಲು ನಿಲುಗಡೆಯಂತಹ ಸಣ್ಣ ಕಾರ್ಯಕ್ರಮಕ್ಕೆ ಬಂದಿರುವ ನಾನು, ಇಲ್ಲಿನ ಜನತೆಯ ಜಗಳ ಕೃತಜ್ಞತೆ, ಆತ್ಮೀಯತೆ, ಸ್ವಾಭಿಮಾನವನ್ನು ನನ್ನ 50 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಕಂಡಿಲ್ಲ. ಜನರ ಸೇವೆಯ ಭಾಗ್ಯ ದೊರಕುವುದೇ ದುರ್ಲಭ, ಅಂತಹದುರಲ್ಲಿ ಜನಸೇವೆಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಜನರಿಗೆ ಕೈಲಾದ ಸಹಾಯ ಮತ್ತು ಅಗತ್ಯ ಸೇವೆ ಸಲ್ಲಿಸುವ ಪಾಠವನ್ನು ಮೋದಿ ಅವರು ನನಗೆ ಕಲಿಸಿದ್ದಾರೆ. ಎಲ್ಲಿಂದಲೋ ಬಂದವನನ್ನು ಜಿಲ್ಲೆಯ ಜನತೆ ಅಪ್ಪಿ, ಒಪ್ಪಿಕೊಂಡಿದ್ದಾರೆ. ನಿಮ್ಮೆಲ್ಲರ ಋಣ ತೀರಿಸುವುದು ನನ್ನ ಜವಾಬ್ದಾರಿ ಮತ್ತು ಕರ್ತವ್ಯ ಎಂದೇ ಭಾವಿಸಿದ್ದೇನೆ ಎಂದರು.

ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​, ತುಮಕೂರು ಶಾಸಕ ಜ್ಯೋತಿಗಣೇಶ್​, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕರವಿ, ಗ್ರಾಪಂ ಅಧ್ಯಕ್ಷೆ ಸುಜಾತಾ ಮಲ್ಲಿಕಾರ್ಜುನಯ್ಯ, ಯಕ್ಷಗಾನ ಕಲಾವಿದ ಕಲ್ಮನೆ ನಂಜಪ್ಪ, ಜೆಡಿಎಸ್​ ಮುಖಂಡ ಕೆ.ಟಿ.ಶಾಂತಕುಮಾರ್​, ಎಸಿ ಸಪ್ತಶ್ರೀ, ತಾಪಂ ಇಒ ಎಚ್​.ಎಂ.ಸುದರ್ಶನ್​, ತಹಸೀಲ್ದಾರ್​ ಎಸ್​.ಪವನ್​ ಕುಮಾರ್​ ಇದ್ದರು.

2 ಹೆಚ್ಚುವರಿ ಮೆಮು ರೈಲು: ಯಾರದ್ದೋ ಕೂಗಾಟ, ಯಾರದ್ದೋ ಕೆಸರಾಟ, 7 ತಿಂಗಳ ಹಿಂದೆ ಬಂದವನನ್ನು ಚೆನ್ನಾಗಿ ತೊಳೆದಿದ್ದೀರಿ, ಇಲ್ಲಿನ ಶ್ರೀ ಚನ್ನಕೇಶವನ ಸನ್ನಿಧಿಗೆ ಬಂದು ಮತ್ತಷ್ಟು ಶುಭ್ರನಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಜಗಳ, ಸ್ವಾಭಿಮಾನ, ಆತ್ಮೀಯತೆ ಎಲ್ಲೂ ಕಂಡಿಲ್ಲ. ಮುಂದಿನ ದಿನಗಳಲ್ಲಿ ಅರಸೀಕೆರೆ ಮತ್ತು ಹಾಸನಕ್ಕೆ 2 ಹೆಚ್ಚುವರಿ ಮೆಮು ರೈಲು ಬಿಡಲಾಗುವುದು. ಅರಳಗುಪ್ಪೆ ಗ್ರಾಮವನ್ನು ದತ್ತು ತೆಗೆದುಕೊಂಡು ಮಾದರಿ ಗ್ರಾಮವಾಗಿ ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.