ಚಾಮರಾಜನಗರ: ಮೈಸೂರು-ಚಾಮರಾಜನಗರ ರೈಲ್ವೆ ವಿದ್ಯುದೀಕರಣ ಕಾಮಗಾರಿ ಮತ್ತು ರೈಲ್ವೆ ನಿಲ್ದಾಣ ಕಾಮಗಾರಿಯನ್ನು ತ್ವರಿತ ಪೂರ್ಣಗೊಳಿಸಿ ಎಂದು ಲೋಕಸಭಾ ಸದಸ್ಯ ಸುನೀಲ್ ಬೋಸ್ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಂಸದರ ಕಚೇರಿಯಲ್ಲಿ ಗುರುವಾರ ರೈಲ್ವೆ ಹಾಗೂ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ‘
ಮೈಸೂರು-ಚಾಮರಾಜನಗರ ರೈಲ್ವೆ ವಿದ್ಯುದೀಕರಣ ಕಾಮಗಾರಿ ಮತ್ತು ಚಾಮರಾಜನಗರದ ರೈಲ್ವೆ ನಿಲ್ದಾಣದ ಕಾಮಗಾರಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು. ನಿಗದಿತ ಸಮಯದೊಳಗೆ ಕಾಮಗಾರಿಯನ್ನು ಮುಗಿಸುವಂತೆ ಸೂಚನೆ ನೀಡಿದರು. ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸುನೀಲ್ ಬೋಸ್ ಅವರು ವನ್ಯಜೀವಿ ಧಾಮದಲ್ಲಿ ಇತ್ತೀಚೆಗೆ ನಡೆದ ಹುಲಿ ಹತ್ಯೆ ಮತ್ತು ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷದ ಕುರಿತು ಮಾಹಿತಿ ಪಡೆದರು.
ಅರಣ್ಯದಂಚಿನಲ್ಲಿರುವ ಗ್ರಾಮಸ್ಥರೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರ ವಿಶ್ವಾಸ ಗಳಿಸಬೇಕು. ಅರಣ್ಯದ ಮಹತ್ವ ತಿಳಿದು ಮುಂದಿನ ದಿನಗಳಲ್ಲಿ ವನ್ಯಜೀವಿಗಳ ಹತ್ಯೆಯಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.