ಹುಬ್ಬಳ್ಳಿ : ಸಿಕಂದರಾಬಾದ್ ವಿಭಾಗದ ಚಿಂತಲಪಲ್ಲಿ ಮತ್ತು ನೆಕ್ಕೊಂಡ ನಿಲ್ದಾಣಗಳ ನಡುವಿನ ಇಂಜಿನಿಯರಿಂಗ್ ಕಾಮಗಾರಿಯ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸೇವೆಯನ್ನು ಭಾಗಶಃ ರದ್ದು ಮತ್ತು ಮಾರ್ಗ ಬದಲಾವಣೆ ಮಾಡಲಾಗಿದೆ.
ಮೇ 20 ರಿಂದ ಜೂನ್ 6 ರವರೆಗೆ ಬೆಳಗಾವಿಯಿಂದ ಹೊರಡುವ ಬೆಳಗಾವಿ-ಸಿಕಂದರಾಬಾದ್ ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲನ್ನು ಕಾಜಿಪೇಟ ಮತ್ತು ಮಣುಗೂರು ನಿಲ್ದಾಣಗಳ ಮಧ್ಯೆ ಭಾಗಶಃ ರದ್ದುಗೊಳಿಸಲಾಗಿದೆ.
ಮೇ 21 ರಿಂದ ಜೂನ್ 7 ರವರೆಗೆ ಮಣುಗೂರು- ಬೆಳಗಾವಿ ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲನ್ನು ಮಣುಗೂರು ಮತ್ತು ಕಾಜಿಪೇಟ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.
ಮಾರ್ಗ ಬದಲಾವಣೆ: ಮೇ 21, 28 ಮತ್ತು ಜೂನ್ 4 ರಂದು ಯಶವಂತಪುರ-ಟಾಟಾನಗರ ಎಕ್ಸ್ಪ್ರೆಸ್ ರೈಲು ಸಿಕಂದರಾಬಾದ್, ಪಗಿಡಿಪಲ್ಲಿ, ಗುಂಟೂರು ಮತ್ತು ವಿಜಯವಾಡ ನಿಲ್ದಾಣಗಳ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ವಾರಂಗಲ್ ಮತ್ತು ಖಮ್ಮಂ ನಿಲ್ದಾಣ ತಪ್ಪಲಿವೆ. ಬದಲಾದ ಮಾರ್ಗದಲ್ಲಿ ಸಂಚರಿಸುವುದರಿಂದ ಗುಂಟೂರು ನಿಲ್ದಾಣಕ್ಕೆ ತಾತ್ಕಾಲಿಕ ನಿಲುಗಡೆ ಒದಗಿಸಲಾಗಿದೆ.