ಜಿಲ್ಲೆ

ರೈಲು ಸಂಚಾರಕ್ಕೆ ವಿದ್ಯುತ್ ಮಾರ್ಗ

Chikkaballapur

ಚಿಕ್ಕಬಳ್ಳಾಪುರ : ಕೋಲಾರ - ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈಲು ಸಂಚಾರಕ್ಕೆ ಹೊಸದಾಗಿ ವಿದ್ಯುದೀಕರಣ ಲೈನ್ ಅಳವಡಿಸುವ ಕಾಮಗಾರಿ ಕೈಗೊಳ್ಳಲು ನೈಋತ್ಯ ರೈಲ್ವೆ ಇಲಾಖೆ ಮುಂದಾಗಿದೆ.

ಪ್ರಸ್ತುತ ಯಲಹಂಕದಿಂದ ದೇವನಹಳ್ಳಿ, ನಂದಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ ಮತ್ತು ಕೋಲಾರದ ಮೂಲಕ ಬಂಗಾರಪೇಟೆಯ ಜಂಕ್ಷನ್ ವರೆಗಿನ 124 ಕಿ.ಮೀ ಉದ್ದದ ವಿದ್ಯುದೀಕರಣ ಕಾಮಗಾರಿಗೆ ಯೋಜನೆ ರೂಪಿಸಲಾಗಿದೆ.

ರೈಲಿನ ಡಿಸೇಲ್ ಇಂಜಿನ್ ಕಾರ್ಯ ನಿರ್ವಹಣೆ ಸಂದರ್ಭದಲ್ಲಿ ಹೆಚ್ಚಿನ ಹೊಗೆ ಹೊರಸೂಸುತ್ತದೆ. ಇದು ಪರಿಸರಕ್ಕೆ ಹಾನಿಕಾರಕವಾಗಿದ್ದು ಮಾಲಿನ್ಯ ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಬಹುತೇಕ ರೈಲ್ವೆ ಹಳಿ ಮಾರ್ಗವನ್ನು ವಿದ್ಯುದೀಕರಣಗೊಳಿಸುತ್ತಿದೆ. ಇದರ ಭಾಗವಾಗಿ ಯಲಹಂಕ, ಚಿಕ್ಕಬಳ್ಳಾಪುರ ಮತ್ತು ಕೋಲಾರ ರೈಲ್ವೆ ಹಳಿ ಮಾರ್ಗದಲ್ಲೂ ಹೊಸ ಕಾಮಗಾರಿ ನಿರ್ವಹಣೆ ಕೈಗೊಳ್ಳಲಾಗುತ್ತಿದೆ.

ರೈಲ್ವೆ ಅಭಿವೃದ್ಧಿಗೆ ಸಹಕಾರ : ಬೆಂಗಳೂರಿನಿಂದ ಮತ್ತು ಚಿಕ್ಕಬಳ್ಳಾಪುರ ಮಾರ್ಗವಾಗಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಪ್ರತ್ಯೇಕವಾಗಿ ಎರಡು ರೈಲು ಮತ್ತು ಮಧ್ಯಾಹ್ನ ವಿಶೇಷ ರೈಲು ಸಂಚರಿಸುತ್ತಿದ್ದು ಪ್ರಸ್ತುತ ಕರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಎಲ್ಲ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದೇ ವೇಳೆ ಕಾಮಗಾರಿ ಕೈಗೊಂಡು, ತ್ವರಿತವಾಗಿ ಮುಗಿಸುವುದು ರೈಲ್ವೆ ಇಲಾಖೆ ಅಧಿಕಾರಿಗಳ ಯೋಜನೆಯಾಗಿದೆ.

ರೈಲು ಸಂಚಾರಕ್ಕೆ ವಿದ್ಯುದೀಕರಣ ಲೈನ್ ಅಳವಡಿಕೆಯು ವರದಾಯಕವಾಗಿದ್ದು ಇದರಿಂದ ಡಿಸೇಲ್ ಬಳಕೆಗೆ ಕಡಿವಾಣ ಬೀಳುತ್ತದೆ. ಜತೆಗೆ ಹೊಗೆ ರಹಿತ ಇಂಜಿನ್ ಪರಿಸರ ಸ್ನೇಹಿಯಾಗಿದೆ. ಜತೆಗೆ ಮುಂಬರುವ ದಿನಗಳಲ್ಲಿ ಹೆಚ್ಚಿನ ರೈಲು ಸಂಚರಿಸಲು ಅನುಕೂಲವಾಗುತ್ತದೆ ಎಂಬ ಮಾತು ಕೇಳಿ ಬಂದಿದೆ.

ಕಾಮಗಾರಿಗೆ ಅಗತ್ಯ ಸಿದ್ಧತೆ : ಈಗಾಗಲೇ ರೈಲ್ವೆ ಮಾರ್ಗದ ಪ್ರಮುಖ ಹಳಿಗಳಲ್ಲಿ ಮಣ್ಣಿನ ಪರೀಕ್ಷೆ ನಡೆಸಲಾಗಿದೆ. ಗ್ರೌಂಡ್ ಅರ್ಥಿಂಗ್, ಹಳಿ ಲೈನ್‌ಗಾಗಿ ವಿದ್ಯುತ್ ಕಂಬ ಅಳವಡಿಕೆಗೆ ಸೂಕ್ತ ಸ್ಥಳದ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿವೆ. ಒಂದು ವರ್ಷದೊಳಗೆ ಕಾಮಗಾರಿ ಮುಗಿಸಲು ಯೋಜನೆ ರೂಪಿಸಲಾಗಿದೆ. ಅಗತ್ಯವಿರುವ ಪರಿಕರಗಳು ಈಗಾಗಲೇ ಪೂರೈಕೆಯಾಗಿವೆ.

ಮತ್ತಷ್ಟು ಯೋಜನೆಗಳು ಅಗತ್ಯ : ಸರ್ವಾಂಗೀಣ ಪ್ರಗತಿಯಲ್ಲಿ ಸಂಪರ್ಕ ಸಾರಿಗೆ ಅಭಿವೃದ್ಧಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಹೂವು ಹಣ್ಣ, ತರಕಾರಿ, ಹಾಲು, ರೇಷ್ಮೆ ಉತ್ಪಾದನೆಯಲ್ಲಿ ಅವಿಭಜಿತ ಕೋಲಾರ ಜಿಲ್ಲೆಯು ಮುಂಚೂಣಿಯಲ್ಲಿದೆ. ಇದಕ್ಕೆ ಈ ಭಾಗದಲ್ಲಿ ಸಂಚಾರದ ರೈಲುಗಳ ಸಂಖ್ಯೆ ಹೆಚ್ಚಾಗಬೇಕು. ಶ್ರೀನಿವಾಸಪುರದಿಂದ ಮದನಪಲ್ಲಿ, ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು, ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ರೈಲ್ವೆ ಹಳಿ ನಿರ್ಮಾವಾಗಬೇಕು. ಇದರ ಮೂಲಕ ಆಂಧ್ರ ಸೇರಿ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸಬೇಕು. ಇದು ತ್ವರಿತ ಆರ್ಥಿಕಾಭಿವೃದ್ಧಿಗೆ ಸಹಕಾರಿಯಾಗಿದೆ.