ವಿಜಯಪುರದ ರೈಲು ನಿಲ್ದಾಣದಲ್ಲಿ ಮಂಗಳವಾರ ಮೈಸೂರು-ಪಂಢರಪುರ ಗೋಲಗುಂಬಜ ಎಕ್ಸ್‌ಪ್ರೆಸ್ ರೈಲು ವಿಸರಣೆಯಾದ ಹಿನ್ನೆಲೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಹಸಿರು ನಿಶಾನೆ ತೋರಿದರು. ನಾಗಠಾಣ ಶಾಸಕ ವಿಠ್ಠಲ ಕಟಕದೋಂಡ, ಹುಬ್ಬಳ್ಳಿಯ ರೈಲ್ವೆ ಅಪರ ವಿಭಾಗೀಯ ವ್ಯವಸ್ಥಾಪಕ ಸಂತೋಷಕುಮಾರ ವರ್ಮಾ, ರೈಲ್ವೆ ಇಲಾಖೆಯ ಸಹಾಯಕ ವಾಣಿಜ್ಯ ವ್ಯವಸ್ಥಾಪಕಿ ನಿವೇದಿತಾ ಬಾಲರೆಡ್ಡಿ, ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ದಾಮೋದರದಾಸ ರಾಠಿ ಉಪಸ್ಥಿತರಿದ್ದರು. 
ಜಿಲ್ಲೆ

ಮೈಸೂರು-ಪಂಢರಪುರ ನಡುವೆ ರೈಲು ಸಂಚಾರಕ್ಕೆ ಹಸಿರುನಿಶಾನೆ

ವಿಜಯಪುರ: ಉತ್ತರ ಕರ್ನಾಟಕ ಭಾಗದ ಬಹುದಿನದ ಬೇಡಿಕೆಯಾಗಿದ್ದ ಪಂಢರಪೂರಕ್ಕೆ ನೇರ ರೈಲು ಸಂಪರ್ಕಿಸುವ ಯೋಜನೆಗೆ ಮಂಗಳವಾರ ಸಂಸದ ರಮೇಶ ಜಿಗಜಿಣಗಿ ಹಸಿರು ನಿಶಾನೆ ತೋರಿದರು.

ನಂತರ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ಈ ಭಾಗದ ಜನರು ಹಾಗೂ ಜನಪ್ರತಿನಿಧಿಗಳು ಬಹಳ ವರ್ಷದಿಂದ ಬೇಡಿಕೆ ಇಟ್ಟಿದ್ದರು. ಮೈಸೂರಿನಿಂದ ಸೋಲಾಪುರಕ್ಕೆ ತೆರಳುತ್ತಿದ್ದ ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲನ್ನು ಪಂಢರಪುರದವರಿಗೆ ವಿಸ್ತರಿಸಲು ರೈಲ್ವೆ ಮಂಡಳಿ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಸೆ. 4ರಿಂದಲೇ ರೈಲು ಮೈಸೂರಿನಿಂದ ಪಂಢರಪುರಕ್ಕೆ ಪ್ರಯಾಣ ಬೆಳೆಸಿದೆ ಎಂದರು.

ಈ ರೈಲಿನಿಂದ ಪಂಢರಪುರ ವಿಠ್ಠಲ ಮಂದಿರಕ್ಕೆ ತೆರಳಿ ದೇವರ ದರ್ಶನ ಪಡೆಯಲು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೋಂಡ, ಹುಬ್ಬಳ್ಳಿಯ ರೈಲ್ವೆ ಅಪರ ವಿಭಾಗೀಯ ವ್ಯವಸ್ಥಾಪಕ ಸಂತೋಷಕುಮಾರ ವರ್ಮಾ, ರೈಲ್ವೆ ಇಲಾಖೆಯ ಸಹಾಯಕ ವಾಣಿಜ್ಯ ವ್ಯವಸ್ಥಾಪಕಿ ನಿವೇದಿತಾ ಬಾಲರೆಡ್ಡಿ, ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ದಾಮೋದರದಾಸ ರಾಠಿ ಉಪಸ್ಥಿತರಿದ್ದರು.
ಮೈಸೂರು-ಪಂಢರಪೂರ ( ಗೋಲಗುಂಬಜ್ ಎಕ್ಸೆಪ್ರೆಸ್ )ರೈಲು ವೇಳಾಪಟ್ಟಿ:
ಮೈಸೂರಿನಿಂದ ಸೋಲಾಪುರ ಗೋಲಗುಂಬಜ್ ಎಕ್ಸೆಪ್ರೆಸ್ ರೈಲು ಪಂಢರಪೂರದವರಿಗೆ ವಿಸ್ತರಣೆ ಮಾಡಲಾಗಿದೆ. ರೈಲು ಸಂಖ್ಯೆ 16535 ಮೈಸೂರಿನಿಂದ ಸೋಲಾಪುರ ತಲುಪುವ ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲು ವಿಸ್ತರಿಸಲಾಗಿದೆ.

ನಿತ್ಯ ಮೈಸೂರು -ಪಂಢರಪುರ ಗೋಲಗುಂಬಜ್ ಎಕ್ಸ್‌ಪ್ರೆಸ್ ಮಧ್ಯಾಹ್ನ 3-45ಕ್ಕೆ ಮೈಸೂರಿನಿಂದ ಹೊರಡಲಿದ್ದು ಮರುದಿನ ಮಧ್ಯಾಹ್ನ 12-25ಕ್ಕೆ ಪಂಢರಪುರ ತಲುಪಲಿದೆ. ಮೈಸೂರಿನಿಂದ ಬಸವನ ಬಾಗೇವಾಡಿ ರೋಡ್ ನಿಲ್ದಾಣದವರೆಗೆ ಈ ರೈಲಿನ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ವಿಜಯಪುರಕ್ಕೆ ಈ ರೈಲು ಬೆಳಗ್ಗೆ 7-55 ಗಂಟೆಗೆ ಆಗಮಿಸಿ ಬೆಳಗ್ಗೆ 8-00 ಕ್ಕೆ ಹೊರಡಲಿದೆ. ಇಂಡಿ ರೋಡ್ ನಿಲ್ದಾಣಕ್ಕೆ ತಲುಪಿ, ಬೆಳಗ್ಗೆ 8-41 ಕ್ಕೆ ಹೊರಟು, ಸೋಲಾಪುರ ನಿಲ್ದಾಣಕ್ಕೆ ಬೆಳಗ್ಗೆ 10-15ಕ್ಕೆ ಆಗಮಿಸಲಿದೆ. ಅಲ್ಲಿಂದ ಕುರ್ಡುವಾಡಿ ನಿಲ್ದಾಣಕ್ಕೆ ಆಗಮಿಸಿ ಬೆಳಗ್ಗೆ 11-25ಕ್ಕೆ ಹೊರಟು ಮಧ್ಯಾಹ್ನ 12.25ಕ್ಕೆ ಪಂಢರಪೂರ ತಲುಪಲಿದೆ.

ರೈಲು ಸಂಖ್ಯೆ 16536 ಪಂಢರಪುರದಿಂದ ಮಧ್ಯಾಹ್ನ 1ಗಂಟೆಗೆ ಹೊರಟು ಮರುದಿನ ಬೆಳಗ್ಗೆ 10-45ಕ್ಕೆ ಮೈಸೂರು ತಲುಪಲಿದೆ. ಈ ಮಾರ್ಗ ಕುರ್ಡುವಾಡಿ ಮೂಲಕ, ಸೋಲಾಪುರ, ಇಂಡಿ ರೋಡ್, ವಿಜಯಪುರಕ್ಕೆ ಸಂಜೆ 5-50ಕ್ಕೆ ಆಗಮಿಸಲಿದೆ.

ಬಸವನ ಬಾಗೇವಾಡಿ ರೋಡ್ ಮೂಲಕ ಆಲಮಟ್ಟಿಗೆ ಆಗಮಿಸಿ ಬಾಗಲಕೋಟೆಗೆ ರಾತ್ರಿ 7-23ಕ್ಕೆ ಬರಲಿದೆ. ಬಾದಾಮಿ, ಹೊಳೆ ಆಲೂರು ಮೂಲಕ ಗದಗ ಜಂಕ್ಷನ್‌ಗೆ ರಾತ್ರಿ 9-40ಕ್ಕೆ ಆಗಮಿಸಿ, ಅಣ್ಣಿಗೇರಿ ಮೂಲಕ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿ, ಅಲ್ಲಿಂದ ಬೆಂಗಳೂರಿಗೆ ತೆರಳಿ ಮೈಸೂರು ತಲುಪಲಿದೆ.