ಬೆಳಗಾವಿ: ಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕೆ ಕೃಷಿ ಭೂಮಿ ಬದಲಾಗಿ ಬಂಜರು ಭೂಮಿ ಬಳಕೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಸೋಮವಾರ ಪ್ರತಿಭಟಿಸಿ, ಸಂಸದೆ ಮಂಗಲ ಅಂಗಡಿ ಅವರಿಗೆ ಮನವಿ ಸಲ್ಲಿಸಿದರು.
ಉತ್ತರ ಕರ್ನಾಟಕದ ಬಹು ವರ್ಷಗಳ ಬೇಡಿಕೆಯಾಗಿದ ಧಾರವಾಡ-ಬೆಳಗಾವಿ ರೈಲ್ವೆ ಮಾರ್ಗ ಯೋಜನೆ ಆರಂಭಿಸುತ್ತಿರುವುದು ಸಂತಸದ ವಿಚಾರ. ಆದರೆ, ಯೋಜನೆಗೆ ಫಲವತ್ತಾದ ಕೃಷಿ ಭೂಮಿ ಬದಲಾಗಿ ಬಂಜರು ಹಾಗೂ ಸರ್ಕಾರಿ ಜಮೀನು ಬಳಸಿಕೊಳ್ಳಬೇಕು. ಜತೆಗೆ ಈ ಮಾರ್ಗವನ್ನು ಕೊಲ್ಲಾಪುರ ಮಾರ್ಗಕ್ಕೆ ಜೋಡಿಸಬೇಕು ಎಂದು ಆಗ್ರಹಿಸಿದರು.
2020ರ ರೈಲ್ವೆ ಇಲಾಖೆಯ ಮೋಜಣಿ ಮತ್ತು ಪರಿಕರಣೆ ಪ್ರಕಾರ ಬೆಳಗಾವಿ, ಸಂಪಗಾಂವ, ಬೈಲಹೊಂಗಲ ಮಾರ್ಗವಾಗಿ ಕಿತ್ತೂರು, ಧಾರವಾಡ ಮಾರ್ಗ ನಿಯೋಜಿಸಲಾಗಿತ್ತು. ದಿ.ಸುರೇಶ ಅಂಗಡಿ ಅವರು ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ದೇಸೂರ, ಕೆ.ಕೆ.ಕೊಪ್ಪ, ಕಿತ್ತೂರು, ಧಾರವಾಡ ಮಾರ್ಗ ನಿರ್ಮಾಣಕ್ಕೆ ಹೊಸ ಮೋಜಣಿ ಹಾಗೂ ಸರ್ಕಾರದಿಂದ ಅನುಮೋದನೆ ಸಿಕ್ಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿದರು.
ದೇಸೂರ-ಕೆ.ಕೆ.ಕೊಪ್ಪ ನಿಯೋಜಿತ ಮಾರ್ಗ ಸಂಪೂರ್ಣ ಕೃಷಿ ಫಲವತ್ತತೆಯ ಕಪ್ಪು ಭೂಮಿಯನ್ನು ಅವಲಂಭಿಸಿದೆ. ಈ ಮಾರ್ಗದಲ್ಲಿ ರೈಲ್ವೆ ಮಾರ್ಗ ನಿರ್ಮಾಣವಾದರೆ ಗರ್ಲಗುಂಜಿ, ದೇಸೂರ, ರಾಜಹಂಸಗಡ, ನಂದಿಹಳ್ಳಿ, ನಾಗೇನಹಳ್ಳಿ, ನಾಗಿರಹಾಳ, ಹಲಗಿಮರಡಿ ಮತ್ತಿತರ ಗ್ರಾಮಗಳ ರೈತರು ಭೂಮಿ ಕಳೆದುಕೊಳ್ಳುವಂತಾಗುತ್ತದೆ. ಆದ್ದರಿಂದ, ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಂದಿನ ಕ್ರಮವಹಿಸಬೇಕು ಎಂದು ಆಗ್ರಹಿಸಿದರು. ರೈತ ಸಂಘಟನೆ ಮುಖಂಡ ಚೂನಪ್ಪ ಪೂಜೇರಿ, ಪ್ರಕಾಶ ನಾಯಕ, ರಾಘವೇಂದ್ರ ನಾಯಕ, ದೇವಪ್ಪ ಕಂಬಾರ, ವಿಜಯ ಕಾಳೆ ಇತರರು ಇದ್ದರು.