ಆನಂದಪುರ: ಬಡ ಮತ್ತು ಮಧ್ಯಮ ವರ್ಗದ ರೈತರಿಗೆ ಉಪಯುಕ್ತ ಆಗುವಂತಹ ರೈತಸ್ನೇಹಿ ಆಡಳಿತದಿಂದ ನಮ್ಮ ಸಹಕಾರ ಸಂಘ ನಿರಂತರವಾಗಿ ಅಭಿವೃದ್ಧಿಯಲ್ಲಿ ಸಾಗಿ ಬಂದಿದೆ ಎಂದು ಆಚಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್.ರಾಜು ತಿಳಿಸಿದರು.
ಶುಕ್ರವಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಕ್ಕೆ ಸುಸಜ್ಜಿತ ಕಟ್ಟಡ ಮತ್ತು ಸಭಾಭವನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಭವಿಷ್ಯದ ದಿನದಲ್ಲಿ 10 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ ಎಂದರು.
ನಿವ್ವಳ ಲಾಭ ವಿಲೇವಾರಿ, ಮುಂದಿನ ವರ್ಷದ ಧ್ಯೇಯ-ಧೋರಣೆಗಳ ಘೋಷಣೆ, 2023-24ನೇ ಸಾಲಿನ ಆಯವ್ಯಯ ಮಂಡನೆ ಮತ್ತು ಕಾರ್ಯಯೋಜನೆ ಅನುಮೋದನೆ, ಲೆಕ್ಕ ಪರಿಶೋಧಕರ ನೇಮಕ, ನ್ಯಾಯಬೆಲೆ ಅಂಗಡಿ ಜವಾಬ್ದಾರಿ ಪಡೆಯುವುದು ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಉಪಾಧ್ಯಕ್ಷ ಮಂಜಪ್ಪ, ಕ್ಷೇತ್ರಾಧಿಕಾರಿ ಮಾಲತೇಶ, ಕಾರ್ಯನಿರ್ವಹಣಾಧಿಕಾರಿ ಭಾಗ್ಯಾ ಇತರರಿದ್ದರು.