ಬೇಲೂರಿನ ಶಾಸಕರ ಕಚೇರಿ ಮುಂದೆ ಪ್ರತಿಭಟಿಸುತ್ತಿರುವ ತಾಲೂಕು ರೈತ ಸಂಘದ ಮುಖಂಡರು.  
ಜಿಲ್ಲೆ

ರೈತಸಂಘ, ಜೆಡಿಎಸ್ ಜಟಾಪಟಿ

ಬೇಲೂರು: ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಶಾಸಕ ಕೆ.ಎಸ್.ಲಿಂಗೇಶ್ ವಿಫಲರಾಗಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಮುಖಂಡರು ಶುಕ್ರವಾರ ತಾಲೂಕು ಪಂಚಾಯಿತಿ ಆವರಣದ ಶಾಸಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭ ರೈತಸಂಘದ ಮುಖಂಡರ ನಡೆಯನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಧಿಕ್ಕಾರ ಕೂಗಿದರು.

ಇದು ಎರಡು ಗುಂಪುಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಮಧ್ಯೆ ಪ್ರವೇಶಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಕಿರಣ್ ಕುಮಾರ್ ಮತ್ತು ಸಿಬ್ಬಂದಿ ಎರಡೂ ಕಡೆಯವರನ್ನು ಸಮಾಧಾನಪಡಿಸಲು ಮುಂದಾದರು. ಇದಕ್ಕೆ ಜಗ್ಗದ ಎರಡೂ ಕಡೆಯವರು ಒಬ್ಬರ ವಿರುದ್ಧ ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. ಇದು ದೊಡ್ಡ ಹೈಡ್ರಾಮಕ್ಕೆ ಕಾರಣವಾಯಿತು. ಪೊಲೀಸರು ಜೆಡಿಎಸ್ ಕಾರ್ಯಕರ್ತರ ಮನವೊಲಿಸಿ ತಾಪಂ ಕಚೇರಿ ಆವರಣದಿಂದ ದೂರಕ್ಕೆ ಕಳುಹಿಸಿದರು.

ಸ್ಥಳಕ್ಕೆ ಬಂದು ಮಾಹಿತಿ ನೀಡಲಿ: ತಾಲೂಕು ರೈತ ಸಂಘದ ಅಧ್ಯಕ್ಷ ಭೋಗ ಮಲ್ಲೇಶ್ ಮಾತನಾಡಿ, ರೈತರು ಕೃಷಿ ಚಟುವಟಿಕೆ ಬಿಟ್ಟು ಪ್ರತಿದಿನ ತಾಲೂಕು ಕಚೇರಿಗೆ ತಿಂಗಳು ಗಟ್ಟಲೇ ಅಲೆಯುವಂತೆ ಮಾಡಿದರೆ ಹೇಗೆ? ಮತ್ತು ರೈತರು ಕೆಲಸ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲು ಲಂಚ ನೀಡಬೇಕಾಗಿದೆ. ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದ ಕೂಲಿ ಕಾರ್ಮಿಕರ ಜೀವ ಹೋದರೆ, ಬೆಳೆಗಾರರ ಸ್ಥಿತಿ ಹೇಳತೀರದಾಗಿದೆ. ಇಲ್ಲಿನ ರಸ್ತೆಗಳು ಕೆಸರು ಗದ್ದೆಯಾಗಿದ್ದು, ಶಾಸಕರು ತಾಲೂಕಿನಲ್ಲಿ ಏನು ಮಾಡುತ್ತಿದ್ದಾರೆ. ಶಾಸಕರು ಪ್ರತಿಭಟನಾ ಸ್ಥಳಕ್ಕೆ ಬಂದು ಮಾಹಿತಿ ನೀಡಬೇಕೆಂದು ಹೇಳಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ ಮಾತನಾಡಿ, ತಾಲೂಕಿನಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಶಾಸಕ ಕೆ.ಎಸ್.ಲಿಂಗೇಶ್ ಗಮನ ಹರಿಸುತ್ತಿಲ್ಲ. ನಮಗೆ ಶಾಸಕರಿಂದ ಉತ್ತರ ಬೇಕು. ನಾವೂ ಅವರಿಗೆ ಮತ ಹಾಕಿದೇವೆ. ಸಾಕಷ್ಟು ಸಮಸ್ಯೆ ಇದೆ. ಯಾವುದೇ ಕಚೇರಿಯಲ್ಲೂ ಲಂಚ ಇಲ್ಲದೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಹವಾಲು ಆಲಿಸಿದ ಕೆ.ಎಸ್.ಲಿಂಗೇಶ್: ಪ್ರತಿಭಟನಾ ಸ್ಥಳಕೆ ಆಗಮಿಸಿದ ಶಾಸಕ ಕೆ.ಎಸ್.ಲಿಂಗೇಶ್, ರೈತ ಸಂಘದ ಅಹವಾಲುಗಳಿಗೆ ಉತ್ತರಿಸಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆ ಮಾಡಲು ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಹಕ್ಕಿದೆ. ನಾನು ಕ್ಷೇತ್ರದ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲೂ ದನಿ ಎತ್ತಿದ್ದೇನೆ. ಅತಿವೃಷ್ಟಿಯಿಂದಾದ ಅನಾಹುತಗಳ ಬಗ್ಗೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದ್ದೇನೆ. ಮಳೆಯಿಂದ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಅಧಿಕಾರಿಗಳು ಯಾರೂ ಲಂಚ ತೆಗೆದುಕೊಳ್ಳುತ್ತಿದ್ದಾರೆ ಅವರ ಹೆಸರು ಕೊಡಿ. ಕಾನೂನು ಕ್ರಮ ಕೈಗೊಳ್ಳುತ್ತೇನೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತಿದ್ದೇನೆ. ಮಳೆಯಿಂದ ತಾಲೂಕಿನ ಸಾಕಷ್ಟು ಮನೆಗಳು ಬಿದ್ದಿವೆ. ಅವರಿಗೆಲ್ಲ ತಾತ್ಕಾಲಿಕ ಪರಿಹಾರ ಕೊಡಲಾಗಿದೆ. ಸರ್ಕಾರ ಅತಿವೃಷ್ಟಿಯಿಂದಾದ ನಷ್ಟಕ್ಕೆ ನಯಾಪೈಸೆ ಪರಿಹಾರ ನೀಡಿಲ್ಲ. ಆದರೂ ಒತ್ತಡ ಹಾಕುತ್ತಿದ್ದೇನೆ ಎಂದು ಲಿಂಗೇಶ್ ಮನದಟ್ಟುಮಾಡಿದರು.