ಕೊಳ್ಳೇಗಾಲ: ಇ-ಸ್ವತ್ತು ರಿನಿವಲ್ ನೀಡದ ವಿಚಾರವಾಗಿ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟಿಸಲು ಗುರುವಾರ ಆಗಮಿಸಿದ್ದ ಸರಗೂರು ಗ್ರಾಮದ ದಂಪತಿ ಬೆಂಬಲಕ್ಕೆ ಬಂದಿದ್ದ ರೈತಸಂಘದ ಪದಾಧಿಕಾರಿಗಳು ಹಾಗೂ ಕರವೇ (ಪ್ರವೀಣ್ ಶೆಟ್ಟಿ) ಹೋರಾಟಗಾರರನ್ನು ಮಧ್ಯವರ್ತಿಗಳೆಂದು ಸಂಬೋಧಿಸಿ ಮಾತನಾಡಿರುವ ಇಒ ಗುರುಶಾಂತಪ್ಪ ಬೆಳ್ಳುಂಡುಗಿ ಕ್ಷಮೆ ಯಾಚಿಸಬೇಕೆಂದು ರೈತಸಂಘ ಹಾಗೂ ಕರವೇ ಪ್ರತಿಭಟನೆ ನಡೆಸಿದರು.
ಸರಗೂರು ಗ್ರಾಮದ ದಂಪತಿಗಳಾದ ಗೌರಮ್ಮ ಹಾಗೂ ರೈತ ಮುಖಂಡ ವೀರಭಧ್ರಸ್ವಾಮಿ ಅವರು ಇ-ಸ್ವತ್ತು ರಿನಿವಲ್ ಮಾಡಿಕೊಡದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕರ ಕಚೇರಿ ಮುಂಭಾಗ ಪ್ರತಿಭಟಿಸಲು ಮುಂದಾದರು. ನೊಂದ ದಂಪತಿಗೆ ರೈತಸಂಘದ ಮುಖಂಡರು ಹಾಗೂ ಕರವೇ (ಪ್ರವೀಣ್ ಶೆಟ್ಟಿ ಬಣ) ಸಂಘಟನೆ ಹೋರಾಟಗಾರರು ಬೆಂಬಲ ಸೂಚಿಸಿದ್ದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಹೋರಾಟ ಗಾರರನ್ನು ಅಗೌರವದಿಂದ ನಡೆಸಿಕೊಂಡಿದ್ದಲ್ಲದೆ, ಮಧ್ಯವರ್ತಿಗಳೆಂದು ಮಾತನಾಡಿದ್ದಾರೆ. ಅದಕ್ಕಾಗಿ ಇಒ ಅವರು ಕ್ಷಮೆಯಾಚಿಸಬೇಕೆಂದು ಹೋರಾಟಗಾರರು ಆಗ್ರಹಿಸಿದರು. ಸ್ಥಳದಲ್ಲಿದ್ದ ಪೊಲೀಸರು ಹೋರಾಟಗಾರರು ಹಾಗೂ ಇಒ ಅವರ ನಡುವೆ ನಡೆಯುತ್ತಿದ್ದ ಮಾತಿನ ಚಕಮಕಿಯನ್ನು ತಿಳಿಗೊಳಿಸಿದರು.
ಇಒ ಗುರುಶಾಂತಪ್ಪ ಬೆಳ್ಳುಂಗುಡಿ ಮಾತನಾಡಿ, ನಿತ್ಯವೂ ನಾವು ಸಾವಿರಾರು ಜನರ ಕೆಲಸ ಮಾಡುತ್ತೇವೆ. ನಾನು ಕಚೇರಿಯಲ್ಲಿಯೇ ಇದ್ದೇನೆ. ನೊಂದವರು ಕಚೇರಿ ಒಳಗೆ ಬಂದು ನನನ್ನು ಕಂಡು ಮನವಿ ಸಲ್ಲಿಸಬಹುದು ಅಥವಾ ಮೇಲಧಿಕಾರಿಗಳಿಗೆ ನೀಡಿದರೂ ಅಭ್ಯಂತರವಿಲ್ಲ, ಅದನ್ನು ಬಿಟ್ಟು ಹೊರಗೆ ಕೂಗಾಡುವ ಅಗತ್ಯವಿಲ್ಲ. ಗೌರಮ್ಮ ಅವರ ಹತ್ತಿರ ಇ-ಸ್ವತ್ತಿಗೆ ಬೇಕಾದ ಎಲ್ಲ ದಾಖಲೆಯಿದ್ದರೆ ಇ-ಸ್ವತ್ತು ನೀಡುತ್ತೇವೆ. ದಾಖಲೆ ಇಲ್ಲದಿದ್ದರೆ ಇಂತಹ ದಾಖಲೆ ಬೇಕೆಂದು ಕೇಳುತ್ತೇವೆ. ಒಂದು ವೇಳೆ ನ್ಯಾಯಬದ್ಧವಾಗಿ ದಾಖಲೆ ಇಲ್ಲದಿದ್ದರೆ ಸ್ಪಷ್ಟವಾಗಿ ಈ ಕೆಲಸ ಆಗುವುದಿಲ್ಲ ಎಂದು ಹೇಳುತ್ತೇವೆ ಎಂದರು.
ರೈತ ಮುಖಂಡ ವೀರಭದ್ರಸ್ವಾಮಿ ಮಾತನಾಡಿ, ಇ-ಸ್ವತ್ತು ರಿನಿವಲ್‌ಗಾಗಿ ಅರ್ಜಿ ಹಾಕಿದ್ದೇವೆ. ಧನಗೆರೆ ಗ್ರಾಪಂ ಕಚೇರಿಗೆ ಅಲೆದಾಡಿ ಸಾಕಾಗಿದೆ. ಧನಗೆರೆ ಪಿಡಿಒ ಸ್ಪಂದಿಸದ ಹಿನ್ನೆಲೆಯಲ್ಲಿ ಧರಣಿ ನಡೆಸಲು ಬಂದಿದ್ದೇವೆ. ಇಒ ಅವರು ನಮಗೆ ಬೆಂಬಲ ನೀಡಲು ಬಂದ ರೈತ ಮುಖಂಡರು ಹಾಗೂ ಕರವೇ ಸಂಘಟನೆ ಅವರನ್ನು ಅಗೌರವದಿಂದ ನಡೆಸಿಕೊಂಡಿದ್ದಾರೆ. ಪಿಡಿಒ ಇ-ಸ್ವತ್ತು ರಿನಿವಲ್ ಗೆ ಅರ್ಜಿ ನೀಡಿದರೆ ಈ ಸ್ಥಳದ ವಿಚಾರ ಕೋರ್ಟ್‌ನಲ್ಲಿದೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ದೂರಿದರು.
ಮಾತಿನ ಚಕಮಕಿ: ಗೌರಮ್ಮ ಹಾಗೂ ವೀರಭದ್ರಸ್ವಾಮಿ ಬೆಂಬಲಕ್ಕೆ ಆಗಮಿಸಿದ್ದ ಹೋರಾಟಗಾರರಿಗೆ ಇಒ ಅವರು ನಿಮ್ಮ ಸಮಸ್ಯೆ ಇದ್ದರೆ ಅರ್ಜಿ ಕೊಡಿ ಎಂದು ಕೇಳಿದರು. ಈ ವೇಳೆ ನಾವು ಬಂದಿರುವುದು ನೊಂದವರ ಬೆಂಬಲಕ್ಕೆ ಎಂದು ಹೋರಾಟಗಾರರು ಪ್ರತಿಕ್ರಿಯಿಸಿದರು. ನಂತರ ಇಒ ಅವರು ಮಾತನಾಡಿ, ನನಗೆ ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ, ಬ್ಲಾಕ್‌ಮೇಲ್ ಮಾಡಲು ಬಂದಿದ್ದೀರಾ ಎಂದರು. ಈ ವೇಳೆ ಇಒ ಹಾಗೂ ರೈತ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಸರಗೂರು ಗ್ರಾಮದ ನಿವಾಸಿ ಗೌರಮ್ಮ, ರೈತ ಮುಖಂಡ ದಶರಥ್, ಸೋಮಣ್ಣ, ರಾಮಕೃಷ್ಣ, ಚಂದ್ರ ಣ್ಣ, ಬಸವರಾಜು ಕರವೇ (ಪ್ರವೀಣ್ ಶೆಟ್ಟಿ ಬಣ) ಆಯಾಜ್ ಮತ್ತಿತರಿದ್ದರು.