ಗೋವಾವೇಸ್ ಬಳಿ ಸೋಮವಾರ ಗೋಕುಲಾ ಆರ್ಗ್ಯಾನಿಕ್ ಇಂಟರ್‌ನ್ಯಾಷನಲ್ ಎಲ್‌ಎಲ್‌ಪಿ ಮಳಿಗೆಯನ್ನು ಭಾಸ್ಕರ ರಾವ್, ಶಂಕರಗೌಡ ಪಾಟೀಲ, ಡಾ.ಬಿ.ಜಿ.ಕಿರಣಕುಮಾರ, ಡಾ.ರುತು ಲಾಡ್ ಉದ್ಘಾಟಿಸಿದರು. 
ಜಿಲ್ಲೆ

ರೈತರು ಸಾವಯವ ಕೃಷಿಗೆ ಆದ್ಯತೆ ನೀಡಲಿ

ಬೆಳಗಾವಿ: ನಗರದಲ್ಲಿ ‘ಗೋಕುಲಾ ಆರ್ಗ್ಯಾನಿಕ್ ಇಂಟರ್‌ನ್ಯಾಷನಲ್ ಎಲ್‌ಎಲ್‌ಪಿ‘ ಆರಂಭವಾಗಿರುವುದು ಹೆಮ್ಮೆಯ ವಿಷಯ. ಜನರು ಸಾವಯವ ಉತ್ಪನ್ನಗಳನ್ನು ಬಳಕೆ ಮಾಡುವ ಮೂಲಕ ಮಳಿಗೆಯ ಲಾಭ ಪಡೆಯಬೇಕು ಎಂದು ರೈಲ್ವೆ ಹೆಚ್ಚುವರಿ ಮಹಾನಿರ್ದೇಶಕ ಭಾಸ್ಕರ ರಾವ್ ಹೇಳಿದರು.

ನಗರದ ಗೋವಾವೇಸ್ ಬಳಿ ಸೋಮವಾರ ಗೋಕುಲಾ ಆರ್ಗ್ಯಾನಿಕ್ ಇಂಟರ್ ನ್ಯಾಷನಲ್ ಎಲ್‌ಎಲ್‌ಪಿ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ದೇಶ-ವಿದೇಶಗಳಲ್ಲಿ ಸಾವಯವ ಆಹಾರ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಪ್ರತಿಯೊಬ್ಬರೂ ಆರೋಗ್ಯ ರಕ್ಷಣೆಗಾಗಿ ಸಾವಯವ ಉತ್ಪನ್ನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ, ರೈತರು ಸಾವಯವ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದರು. ಸಾವಯವ ಮಳಿಗೆಗಳು ಆರಂಭವಾಗುವುದರಿಂದ ರೈತರಿಗೆ ನೇರವಾಗಿ ಲಾಭ ಸಿಗುತ್ತದೆ. ಮಧ್ಯವರ್ತಿಗಳಿಂದ ರೈತರು ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುತ್ತಿದೆ. ಕೃಷಿ ವಿಷಯದಲ್ಲಿ ಉನ್ನತ ಪದವಿ ಗಳಿಸಿದ ವಿದ್ಯಾರ್ಥಿಗಳು ಉದ್ಯೋಗ ಹುಡುಕಿಕೊಂಡು ಬೇರೆ ಕ್ಷೇತ್ರದತ್ತ ಮುಖ ಮಾಡುವ ಬದಲು ಕೃಷಿ ಕ್ಷೇತ್ರಕ್ಕೆ ಬರುವುದು ಸೂಕ್ತ. ಇಂತಹ ಸಾವಯವ ಮಳಿಗೆಗಳನ್ನು ಎಲ್ಲ ಮಹಾನಗರಗಳಲ್ಲೂ ಆರಂಭಿಸಬೇಕು ಎಂದರು. ರಾಜ್ಯ ಸರ್ಕಾರದ ದೆಹಲಿ ಮಾಜಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಮಾತನಾಡಿ, ಇಂದಿನ ದಿನಗಳಲ್ಲಿ ಸಾವಯವ ಕೃಷಿ, ಉತ್ಪನ್ನಗಳನ್ನು ಉಳಿಸುವುದು ಅವಶ್ಯಕವಾಗಿದೆ. ರೋಗ ಮುಕ್ತ ಆರೋಗ್ಯ ಪಡೆದುಕೊಳ್ಳಬೇಕಾದರೆ ಪ್ರತಿಯೊಬ್ಬರೂ ಸಾವಯವ ಉತ್ಪನ್ನ ಬಳಸಬೇಕು. ಜಿ.ಎಲ್.ಹನುಮಂತಗೌಡ ಅವರ ಪರಿವಾರವೇ ಸಾವಯವ ಕೃಷಿ, ಉತ್ಪನ್ನಗಳ ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದರು.

ಎಫ್‌ಕೆಸಿಸಿಐ, ಸಿಎಸ್‌ಆರ್ ಸಮಿತಿ ಅಧ್ಯಕ್ಷ ಡಾ.ಬಿ.ಜಿ.ಕಿರಣಕುಮಾರ ಮಾತನಾಡಿ, ದೇಶದಲ್ಲಿ ಸಾವಯವ ಉತ್ಪನ್ನಗಳ ಬಳಕೆ ಪ್ರಮಾಣ ಹೆಚ್ಚುತ್ತಿರುವುದರಿಂದ ಉತ್ಪಾದನೆ ಹೆಚ್ಚಿಸುವುದು ಅಗತ್ಯ. ಬೆಳಗಾವಿ ನೆಲದಿಂದಲೇ ಸಾವಯವ ಕೃಷಿ ಉತ್ಪನ್ನಗಳು ದೇಶ-ವಿದೇಶಗಳಿಗೆ ರಫ್ತಾಗುತ್ತಿದೆ. ಇದೀಗ ನಗರದಲ್ಲಿ ಸಾವಯವ ಮಳಿಗೆ ಆರಂಭವಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಇಂತಹ ಮಳಿಗೆಗಳನ್ನು ಬೆಂಗಳೂರಿನಲ್ಲಿ ಆರಂಭಿಸುವುದು ಅವಶ್ಯ. ಅದಕ್ಕಾಗಿ ಬೇಕಾದ ಎಲ್ಲ ರೀತಿಯ ಸಹಕಾರವನ್ನು ಎಫ್‌ಕೆಸಿಸಿಐ ನೀಡಲಿದೆ ಎಂದು ಭರವಸೆ ನೀಡಿದರು. ಡಾ.ಗಿರೀಶ ಸೋನವಾಲಕರ, ಉದ್ಯಮಿ ಬಾಲಕೃಷ್ಣ ನಾಯಕ ಇತರರು ಇದ್ದರು.

ಸಾವಯವ ಉತ್ಪನ್ನಗಳನ್ನು ದೇಶ-ವಿದೇಶಗಳಿಗೆ ರಫ್ತು ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ತಂದೆಯ ಕನಸಿನಂತೆ ದೇಶದ ಜನರಿಗೆ ಸಾವಯವ ಉತ್ಪನ್ನಗಳನ್ನು ನೀಡಲಾಗುತ್ತಿದೆ. ಬೆಳಗಾವಿ ನಗರದಲ್ಲಿ ಗೋಕುಲಾ ಆರ್ಗ್ಯಾನಿಕ್ ಇಂಟರ್‌ನ್ಯಾಷನಲ್ ಎಲ್‌ಎಲ್‌ಪಿ ಮಳಿಗೆ ಆರಂಭಿಸಲಾಗುತ್ತಿದೆ. ಜನರು ಸದುಪಯೋಗಪಡಿಸಿಕೊಳ್ಳಬೇಕು.| ಬಿ.ಎಚ್.ಹನುಮಂತಗೌಡ ಜಿಒಐಎಲ್ ಸಂಸ್ಥಾಪಕ, ಅಧ್ಯಕ್ಷರು ಹಾಗೂ ಸಾವಯವ ರೈತ ಸಂಘದ ಅಧ್ಯಕ್ಷಬೆಳಗಾವಿ ನಗರದಲ್ಲಿ ಮೊದಲ ಬಾರಿಗೆ ಗೋಕುಲಾ ಆರ್ಗ್ಯಾನಿಕ್ ಇಂಟರ್‌ನ್ಯಾಷನಲ್ ಎಲ್‌ಎಲ್‌ಪಿ ಮಳಿಗೆ ಕಾರ್ಯಾರಂಭ ಮಾಡಿದೆ. ಗೋವಾ, ಮಹಾರಾಷ್ಟ್ರದಲ್ಲಿ ಸಾವಯವ ಮಳಿಗೆಗಳನ್ನು ಪ್ರಾರಂಭಿಸಲಾಗುತ್ತಿದೆ. ಸಾವಯವ ಕೃಷಿ ಮತ್ತು ಉತ್ಪನ್ನಗಳ ಕುರಿತು ರೈತರಿಗೆ ಜಾಗೃತಿ ಜತೆಗೆ ತರಬೇತಿ ನೀಡಲಾಗುತ್ತಿದೆ. ಈ ಸಾವಯವ ಮಳಿಗೆಗಳಲ್ಲಿ 500ಕ್ಕಿಂತ ಹೆಚ್ಚು ಸಾವಯವ ಉತ್ಪನ್ನಗಳು ಲಭ್ಯವಿವೆ. ಜನರು ಸದುಪಯೋಗ ಪಡಿಸಿಕೊಳ್ಳಬೇಕು.| ಡಾ.ರುತು ಲಾಡ್ ಗೋಕುಲಾ ಆರ್ಗ್ಯಾನಿಕ್ ಇಂಟರ್‌ನ್ಯಾಷನಲ್ ಎಲ್‌ಎಲ್‌ಪಿ ಮುಖ್ಯಸ್ಥೆ