ಜಿಲ್ಲೆ

ರೈತರು ವಾತಾವರಣಕ್ಕೆ ತಕ್ಕಂತೆ ಬೆಳೆ ಬೆಳೆಯಬೇಕು:ಡಾ.ಎಚ್.ಎಸ್.ಶಿವರಾಮು

ಹಾಸನ: ರೈತರು ವಾತಾವರಣಕ್ಕೆ ತಕ್ಕಂತೆ ಬೆಳೆ ಬೆಳೆಯುವ ಬಗ್ಗೆ ಮತ್ತು ಕೃಷಿ ತಂತ್ರಜ್ಞಾನ ಮಾಹಿತಿಯನ್ನು ಕೃಷಿ ಮೇಳದಲ್ಲಿ ಎಲ್ಲಾ ರೈತರು ಪಡೆಯಬೇಕು ಎಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನ ನಿರ್ದೇಶಕ ಡಾ.ಎಚ್.ಎಸ್.ಶಿವರಾಮು ಹೇಳಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಕಾರೇಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಕೃಷಿ ಕಾರ್ಯಾನುಭವ ಶಿಬಿರ 2024-25 ರ ವಸ್ತು ಪ್ರದರ್ಶನವನ್ನು ಬುಧವಾರ ತಾಲೂಕಿನ ದುದ್ದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕೃಷಿ ಮಹಾವಿದ್ಯಾಲಯ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೆನರಾ ಬ್ಯಾಂಕ್, ಕೃಷಿ ಸಂಬಂಧಿತ ಇಲಾಖೆಗಳು ಹಾಗೂ ವಿವಿಧ ಕೃಷಿ ಕಾರ್ಯಾನುಭವ ಶಿಬಿರದ ಹಳ್ಳಿಗಳಾದ ಎಚ್.ಮೈಲನಹಳ್ಳಿ, ಸೋಮನಹಳ್ಳಿ, ಜೋಡಿ ಕೃಷ್ಣಾಪುರ, ಕಬ್ಬಳಿ, ಕೆ.ಹೊಸಹಳ್ಳಿ, ಹಾಗೂ ಕೋರವಂಗಲ ಗ್ರಾಮಗಳ ಸಹಯೋಗದೊಂದಿಗೆ ಅದ್ದೂರಿಯಾಗಿ ಕೃಷಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಅಂತಿಮ ವರ್ಷದ ವಿದ್ಯಾರ್ಥಿಗಳು ಮೂರು ತಿಂಗಳು ಕಾಲ ಹಳ್ಳಿಯಲ್ಲಿ ವಾಸ್ತವ್ಯ ಮಾಡಿ ರೈತರಿಂದ ಹಲವಾರು ವಿಷಯಗಳನ್ನು ಕಲಿಯುವುದರ ಜೊತೆಗೆ ತಾವು ಕಲಿತ ತಾಂತ್ರಿಕತೆ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.

ಹಾಸನ ಪಶುವೈದ್ಯಾಕೀಯ ಮಹಾವಿದ್ಯಾಲಯದ ಡೀನ್ ಡಾ.ಓ.ಆರ್.ನಟರಾಜು ಮಾತನಾಡಿ, ನಮ್ಮ ವಿದ್ಯಾರ್ಥಿಗಳು ತಮ್ಮ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಅಚ್ಚುಕಟ್ಟಾಗಿ ತಮ್ಮ ವಿವಿಧ ಕೃಷಿ ಚಟುವಟಿಕೆಗಳನ್ನು ರೈತರಿಗೆ ಮನಮುಟ್ಟುವ ಹಾಗೇ ವಿವರಿಸಿದ್ದಾರೆ. ಅದೇ ರೀತಿ ರೈತರಿಗೆ ಕೃಷಿ ವಿಶ್ವವಿದ್ಯಾಲಯ ನಡೆಯುವ ಕೃಷಿ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ವಿವಿಧ ಕೃಷಿ ತಂತ್ರಜ್ಞಾನದ ಮಾಹಿತಿ ಪಡೆದುಕೊಂಡು ಅದನ್ನು ಅವರು ಅಳವಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಹಾಸನ ಕೃಷಿ ಮಹಾವಿದ್ಯಾಲಯ ಡೀನ್ ಡಾ.ಕೆ.ಎನ್.ಮುನಿಸ್ವಾಮಿ ಗೌಡ ಮಾತನಾಡಿ, ತಮ್ಮ ವಿದ್ಯಾರ್ಥಿಗಳು ಎಲ್ಲಾ ಹಳ್ಳಿಗಳಲ್ಲಿ ಅತ್ಯುತ್ತಮ ರೀತಿಯಲ್ಲಿ ತಮ್ಮ ಕೆಲಸವನ್ನು ನಿರ್ವಹಿಸಿದ್ದಾರೆ ಎಂದು ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಅದೇ ರೀತಿ ಕೃಷಿಯಲ್ಲಿ ಉತ್ತಮ ಆದಾಯಕ್ಕಾಗಿ ಪಂಚ ಸೂತ್ರ ಅಳವಡಿಸಲು ರೈತರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ವತಿಯಿಂದ ಆರು ಹಳ್ಳಿಯ ಪ್ರಗತಿಪರ ರೈತ ಮತ್ತು ರೈತ ಮಹಿಳೆಯರನ್ನುಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಂದಲಿ ಕೃಷಿ ಸಂಶೋಧನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ರಾಜೇಗೌಡ, ಮಡೇನೂರು ಕೃಷಿ ಸಂಶೋಧನ ಕೇಂದ್ರ ಅಧೀಕ್ಷಕ ಡಾ.ಯೋಗೀಶ್, ಸಹಾಯಕ ಕೃಷಿ ನಿರ್ದೇಶಕ ಮನು ,ಮಲಬಾರ್ ಗೋಲ್ಡ್‌ನ ವ್ಯವಸ್ಥಾಪಕ ನಿದೇರ್ಶಕ ದಯಾನಂದ ಸೇರಿಂದತೆ ಇತರರು ಇದ್ದರು.