ಜಿಲ್ಲೆ

ರೈತರು ಬೆಳೆದ ತರಕಾರಿಗೆ ವೈಜ್ಞಾನಿಕ ಬೆಲೆ ನಿಗದಿ ಆಗ್ರಹಿಸಿ ಪ್ರತಿಭಟನೆ

ಹಾಸನ: ಎಲ್ಲ ವಸ್ತುಗಳಿಗೂ ಕೂಡ ಪ್ರತಿನಿತ್ಯ ಬೆಲೆ ಏರಿಕೆಯಾಗುತ್ತಿದೆ. ಆದರೆ ರೈತ ಬೆಳೆದಂತಹ ತರಕಾರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಆದ್ದರಿಂದ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ತರಕಾರಿಗಳನ್ನು ಹಂಚುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.

ರೈತ ಮುಖಂಡ ಕಣಗಾಲ್ ಮೂರ್ತಿ ನೇತೃತ್ವದಲ್ಲಿ ರೈತರು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ತಲೆ ಮೇಲೆ ತರಕಾರಿ ಬುಟ್ಟಿಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಲು ಅವಕಾಶವಿಲ್ಲ. ಪ್ರತಿಭಟನೆಗಾಗಿ ಡಿಸಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆಗೆ ಅವಕಾಶ ಮಾಡಿಕೊಡಲಾಗಿದೆ. ಅಲ್ಲಿ ಪ್ರತಿಭಟನೆ ಮಾಡಬೇಕು ಎಂದು ಮನವಿ ಮಾಡಿದರು. ಆದರೆ ಪ್ರತಿಭಟನಾಕಾರರು ಪಟ್ಟು ಸಡಿಲಿಸದೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ, ಜಿಲ್ಲೆಯಲ್ಲಿ ರೈತರು ಸಂಕಷ್ಟದಲ್ಲಿ ತರಕಾರಿ ಬೆಳೆ ಬೆಳೆಯುತ್ತಿದ್ದಾರೆ. ರೈತರು ಬೆಳೆದ ತರಕಾರಿಗಳಿಗೆ ನಿಗದಿತ ಬೆಲೆ ಮತ್ತು ಮಾರುಕಟ್ಟೆ ಶಿಥಲೀಕರಣದ ವ್ಯವಸ್ಥೆ ಇಲ್ಲದೆ ಮತ್ತು ಮಾರುಕಟ್ಟೆಯು ವ್ಯವಸ್ಥಿತವಾಗಿಯೂ ಇಲ್ಲದೆ ಹಾಕಿದ ಬಂಡವಾಳವು ಸಹ ರೈತರಿಗೆ ಬರುತ್ತಿಲ್ಲ. ಆದ್ದರಿಂದ ರೈತರಿಗೆ ನೇರವಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸ್ಥಳಾವಕಾಶ ಕಲ್ಪಿಸಿಕೊಡಬೇಕು ಹಾಗೂ ಶಿಥಲೀಕರಣದ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಮತ್ತು ರೈತರ ಕಟ್ಟೆ ಹತ್ತಿರ ದಲ್ಲಾಳಿಗಳ ನಾಮಫಲಕ ತೆಗೆಸಬೇಕು. ರೈತರಿಂದ ತೆಗೆದುಕೊಳ್ಳುವ ಕಮಿಷನ್ ರದ್ದಾಗಬೇಕು ಮತ್ತು ತರಕಾರಿ ದರವನ್ನು ಅಧಿಕಾರಿಗಳು ಮತ್ತು ರೈತರ ಸಮ್ಮುಖದಲ್ಲಿ ನಿಗದಿಪಡಿಸಬೇಕು. ತರಕಾರಿ ಕಟ್ಟೆ ಆವರಣದಲ್ಲಿ ಸಹಾಯವಾಣಿ ತೆರೆದು ರೈತರಿಗೆ ತೊಂದರೆಯಾದರೆ ಯಾವ ಸಂದರ್ಭದಲ್ಲಿ ತಕ್ಷಣವೇ ಅಧಿಕಾರಿಗಳು ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ರೈತರಿಗೆ ಆಗುತ್ತಿರುವಂತಹ ಅನ್ಯಾಯ ಮತ್ತು ಸರಿಯಾದ ಬೆಲೆ ಸಿಗದೇ ರೈತರು ಸಂಕಷ್ಟದಲ್ಲಿರುವ ಬಗ್ಗೆ ಜಿಲ್ಲಾಧಿಕಾರಿಗೆ ಎಳೆ ಎಳೆಯಾಗಿ ಕಣಗಾಲ್ ಮೂರ್ತಿ ತೆರೆದಿಟ್ಟರು. ಈ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ ಅವರು ದಯಮಾಡಿ ನಮಗೆ ನ್ಯಾಯ ದೊರಕಿಸಿಕೊಡಿ. ಸರಿಯಾದ ಬೆಲೆಯನ್ನು ನಿಗದಿಪಡಿಸಬೇಕು ಮತ್ತು ಎಪಿಎಂಸಿ ಮಾರುಕಟ್ಟೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ ನಮಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು. ತಕ್ಷಣವೇ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಕೃಷಿ ಅಧಿಕಾರಿ ಹಾಗೂ ಎಪಿಎಂಸಿ ಅಧಿಕಾರಿಗಳನ್ನು ಕರೆದು ಮಾತನಾಡಿದರು.

ರೈತರು ತರಕಾರಿ ಬೆಳೆಗಳನ್ನು ಬೆಳೆದಿದ್ದು ಅವುಗಳಿಗೆ ಸರಿಯಾದ ರೀತಿ ಬೆಲೆ ಸಿಗುತ್ತಿಲ್ಲ. ಆದ್ದರಿಂದ ತಲೆಯ ಮೇಲೆ ತರಕಾರಿ ಬುಟ್ಟಿಗಳನ್ನು ಹೊತ್ತುಕೊಂಡು ಬಂದಿದ್ದೇವೆ. ದಯಮಾಡಿ ಇಲ್ಲಿರುವಂತಹ ಎಲ್ಲ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಚಿತವಾಗಿ ತರಕಾರಿ ತೆಗೆದುಕೊಂಡು ಹೋಗಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳಿಗೂ ಕೂಡ ಉಚಿತವಾಗಿ ತರಕಾರಿ ಬುಟ್ಟಿಯನ್ನು ನೀಡಲು ಮುಂದಾದರು. ಆದರೆ ಜಿಲ್ಲಾಧಿಕಾರಿಗಳು ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರವನ್ನು ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.

ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಬೇಕು ಎಂದು ಹಠ ಹಿಡಿದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ಜಿಲ್ಲಾಧಿಕಾರಿಗಳ ಆವರಣದ ಗೇಟಿನ ಮುಂಭಾಗ ತಡೆದು ಪ್ರತಿಭಟನೆಗೆ ಅಂಬೇಡ್ಕರ್ ಪ್ರತಿಮೆ ಎದುರು ಅವಕಾಶ ಮಾಡಿಕೊಡಲಾಗಿದೆ. ಅಲ್ಲಿ ಪ್ರತಿಭಟನೆ ಮಾಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ನಾವು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಹಠ ಹಿಡಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ವಾಗ್ವಾದ ನಡೆಯಿತು. ಜಿಲ್ಲಾಧಿಕಾರಿಗಳ ಆದೇಶ ಮಾಡಿದ್ದಾರೆ ಎಂದು ಪೋಲೀಸರು ಹೇಳಿದಾಗ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳು ಮೇಲಿಂದ ಇಳಿದು ಬಂದಿಲ್ಲ. ಅವರು ಕೂಡ ನಮ್ಮಂತೆ ಮನುಷ್ಯರು. ನಾವು ನಮ್ಮ ಸಮಸ್ಯೆಯನ್ನು ಹೇಳಲು ಬಂದಿದ್ದೇವೆ. ಅಲ್ಲೇ ಪ್ರತಿಭಟನೆ ಮಾಡುತ್ತೇವೆ ಎಂದು ಪಟ್ಟು ಹಿಡಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಮಂಜು, ಮಲ್ಲೇಶ್, ಪ್ರಕಾಶ್, ತೇಜೂರು ಆನಂದ, ಯತೀಶ್ ಮತ್ತಿತರರು ಪಾಲ್ಗೊಂಡಿದ್ದರು.