ಜಿಲ್ಲೆ

ರೈತರು ಬೆಳೆ ವಿಮೆಗೆ ನೋಂದಾಯಿಸಿ

ಬಳ್ಳಾರಿ : ಜಿಲ್ಲೆಯ ಎಲ್ಲಾ ರೈತರು ತಪ್ಪದೇ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.
ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಪ್ರಸ್ತಕ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯ ಪರಿಣಾಮಕಾರಿ ಅನುಷ್ಟಾನದ ನಡೆದ ಜಿಲ್ಲಾ ಮಟ್ಟದ ಅನುಷ್ಟಾನ ಸಮಿತಿ ಸಭೆಯಲ್ಲಿ ಮಾತನಾಡಿದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲಿ ಕೃಷಿ ಚಟುವಟಿಕೆಗಳು ಬರದಿಂದ ಸಾಗುತ್ತಿವೆ. ಎಲ್ಲ ಅಧಿಕಾರಿಗಳು ಜಿಲ್ಲೆಯಲ್ಲಿ ಬೆಳೆ ವಿಮೆ ಕುರಿತು ವ್ಯಾಪಕ ಪ್ರಚಾರ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಯೋಜನೆಯಡಿ ರೈತರನ್ನು ನೋಂದಾಯಿಸಿಕೊಳ್ಳುವಂತೆ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಸೂಚಿಸಿದರು.
ಬೆಳೆ ವಿಮೆಗೆ ನೋಂದಾಯಿಸಲು ಎಲ್ಲಾ ರೈತರು ಅದರಲ್ಲಿ ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಅರ್ಹರಿದ್ದು, ಸ್ಥಳೀಯ ಬ್ಯಾಂಕ್, ಸಾರ್ವಜನಿಕ ಸೇವಾ ಕೇಂದ್ರಗಳು ಹಾಗೂ ಗ್ರಾಪಂ ಯಲ್ಲಿ ಹೊಸದಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮಒನ್ ಸೇವಾ ಕೇಂದ್ರಗಳಲ್ಲಿ ಬೆಳೆ ವಿಮೆ ಮಾಡಿಸಬಹುದು ಎಂದರು.
ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಸೋಮಸುಂದರ್ ಮಾತನಾಡಿ, ನೀರಾವರಿ ಮತ್ತು ಮಳೆಯಾಶ್ರೀತ ಬೆಳೆಗಳಾದ ಭತ್ತ, ರಾಗಿ, ನವಣೆ, ಹುರುಳಿ, ನೆಲಗಡಲೆ, ಸಜ್ಜೆ ಬೆಳೆಗಳಿಗೆ ವಿಮೆಗೆ ನೋಂದಾಯಿಸಲು ಆ.16 ಕೊನೆಯ ದಿನವಾಗಿದ್ದು, ಎಲ್ಲ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ವಿಮೆಗೆ ನೋಂದಾಯಿಸಲು ತಾಲೂಕು ಕೃಷಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಿಳಿಸಿದರು.