ತ್ಯಾಗರ್ತಿ: ಆಹಾರ ಭದ್ರತೆ ದೃಷ್ಟಿಯಿಂದ ರೈತರು ಅಡಕೆ ಬೆಳೆಗೆ ಪರ್ಯಾಯವಾಗಿ ತಾಳೆ ಬೆಳೆಯುವ ಕಡೆ ಗಮನ ಹರಿಸಬೇಕು ಇದಕ್ಕೆ ಸರ್ಕಾರದ ಸಹಾಯ ಧನ ಮತ್ತು ತಾಂತ್ರಿಕ ಸಹಾಯ ಸಿಗುತ್ತದೆ ಎಂದು ಕಲ್ಪವೃಕ್ಷ ಆಯಿಲ್ ಪಾಮ್ ಕಂಪನಿ ವ್ಯವಸ್ಥಾಪಕ ಪರಮೇಶ್ವರ ಹೆಗಡೆ ಹೇಳಿದರು.
ನೀಚಡಿಯಲ್ಲಿ ತೋಟಗಾರಿಕಾ ಇಲಾಖೆಯಿಂದ ಏರ್ಪಡಿಸಿದ್ದ ಮೆಗಾ ತಾಳೆ ಬೆಳೆ ಪ್ರೋತ್ಸಾಹ ಅಭಿಯಾನದಲ್ಲಿ ಮಾತನಾಡಿದ ಅವರು, ತಾಳೆ ಬೆಳೆಯುವ ರೈತರಿಗೆ ಮಾರುಕಟ್ಟೆ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಅಕೃತ ಸಂಸ್ಥೆಯಿಂದ ತಾಳೆ ಹಣ್ಣು ಖರೀದಿ ಮಾಡಲಾಗುವುದು. ತಿಂಗಳಿಗೊಮ್ಮೆ ರೈತರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಪಾವತಿಯಾಗುತ್ತದೆ. ತಾಳೆ ಉತ್ಪಾದನಾ ವೆಚ್ಚವೂ ಕಡಿಮೆ. ಸರ್ಕಾರದಿಂದ ಬೆಂಬಲ ಬೆಲೆಯೂ ದೊರೆಯುತ್ತದೆ. ತಾಳೆ ಜತೆಗೆ ಅಂತರ ಬೆಳೆಯಾಗಿ ತರಕಾರಿ, ಬಾಳೆ, ಶೇಂಗಾ, ಜೋಳ, ರಾಗಿ, ಶುಂಠಿ ಮುಂತಾದ ವಾರ್ಷಿಕ ಬೇಸಾಯ ಮಾಡಬಹುದು ಎಂದು ಹೇಳಿದರು.
ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಮಹಾಬಲೇಶ್ವರ ಮಾತನಾಡಿ, ತಾಳೆ ಬೆಳೆಯುವ ರೈತರು ಸಂಘಟಿತರಾಗಿ ಸರ್ಕಾರದ ಸೌಲಭ್ಯ ಬಳಸಿಕೊಂಡರೆ ಆಧುನಿಕ ತಂತ್ರಜ್ಞಾನದಲ್ಲಿ ಬೆಳೆ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ತಾಳೆ ಬೆಳೆದರೆ ದೇಶದ ಖಾದ್ಯ ತೈಲದ ಕೊರತೆ ನೀಗಿಸಿ ವಿದೇಶಿ ವಿನಿಮಯ ಉಳಿಸಲು ಸಾಧ್ಯವಾಗುತ್ತದೆ. ರೈತರ ಆರ್ಥಿಕ ಮಟ್ಟವೂ ಸುಧಾರಣೆ ಆಗುತ್ತದೆ ಎಂದರು.
ಪ್ರಗತಿಪರ ಕೃಷಿಕ ಗಜಾನನ ಭಟ್, ತಾಳೆ ಬೆಳೆಗಾರ ದತ್ತಾತ್ರೇಯ, ತಾಳೆ ಬೆಳೆ ಯೋಜನೆಯ ಸಹಾಯಕ ನಿರ್ದೇಶಕ ಉಲ್ಲಾಸ್, ಹಿರೇಬಿಲಗುಂಜಿ ಪಿಡಿಒ ಶೇಖರಪ್ಪ, ಕ್ಷೇತ್ರಾಕಾರಿ ನಂದೀಶ್, ಕಸಬಾ ಹೋಬಳಿ ಎಎಚ್‌ಒ ಅವಿನಾಶ್ ಇದ್ದರು.