ಜಿಲ್ಲೆ

ರೈತರು, ಜನಸಾಮಾನ್ಯರ ಕೆಲಸಗಳನ್ನು ಶೀಘ್ರ ಮಾಡಿಕೊಡಿ

ಮದ್ದೂರು: ಕಂದಾಯ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾತೃ ಹೃದಯದಿಂದ ರೈತರ ಹಾಗೂ ಜನಸಾಮಾನ್ಯರ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡಬೇಕೆಂದು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಸೂಚಿಸಿದರು.

ಪಟ್ಟಣದ ತಾಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕಂದಾಯ ಇಲಾಖೆ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ವಿ.ಎ.ಮುರಳೀಧರ ಅವರನ್ನು ಅಭಿನಂದಿಸಿ ಮಾತನಾಡಿದರು.

ತಾಲೂಕು ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷರಾಗಿದ್ದ ಎಚ್.ಮಂಜುನಾಥ್ ಅವರು ಮಂಡ್ಯ ತಾಲೂಕಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ರಾಜಸ್ವ ನಿರೀಕ್ಷಕ ವಿ.ಎ.ಮುರಳೀಧರ ಅವರನ್ನು ಜಿಲ್ಲಾ ಸಮಿತಿಯಿಂದ ನೇಮಕ ಮಾಡಲಾಗಿದೆ ಎಂದರು.

ವಿ.ಎ.ಮುರಳೀಧರ ಅವರು ದಶಕಗಳಿಗೂ ಮೇಲ್ಪಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಅವರಿಗೆ ತಾಲೂಕು ಅಧ್ಯಕ್ಷರಾಗಿ ನೇಮಕ ಮಾಡಿದ್ದು ಖುಷಿ ತಂದಿದೆ ಎಂದರು.

ಇಲಾಖೆಯ ನೌಕರರ ಸಹಕಾರ ಇಲ್ಲದೆ ಉತ್ತಮ ಆಡಳಿತ ನೀಡುವುದು ಅಸಾಧ್ಯ.

ಕಂದಾಯ ಇಲಾಖೆ ಎಲ್ಲ ಇಲಾಖೆಗಳ ಮಾತೃ ಇಲಾಖೆ ಎಂದು ಹೇಳಿದರೆ ಮಾತ್ರ ಸಾಲದು. ಕಂದಾಯ ಇಲಾಖೆ ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ಜನರ ಜತೆಗೆ ಸಂಪರ್ಕ ಹೊಂದಿರುವ ಇಲಾಖೆ. ಜನ ಸೇವೆ ಮಾಡಲು ನಿಮಗೆ ಅವಕಾಶ ಸಿಕ್ಕಿದೆ ಅದನ್ನು ಉತ್ತಮ ರೀತಿಯಲ್ಲಿ ತಾವುಗಳು ಮಾತೃ ಹೃದಯದಿಂದ ಮಾಡಬೇಕು ಜನರಿಗೆ ಒಳಿತನ್ನು ಮಾಡುವುದಷ್ಟೆ ನಮ್ಮ ಕೆಲಸವಾಗಲಿ ಎಂದು ಸಲಹೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಂದಾಯ ಇಲಾಖೆ ನೌಕರರ ಸಂಘದ ನೂತನ ಅಧ್ಯಕ್ಷ ವಿ.ಎ.ಮುರಳೀಧರ, ಸಾರ್ವಜನಿಕ ಕೆಲಸದಲ್ಲಿ ನಿರಂತರಾಗಿರುವ ನೌಕರರ ಹಿತಾಸಕ್ತಿ ಕಾಪಾಡುವ ಕಾರ್ಯಕ್ಕೆ ಸದಾ ಬದ್ಧನಾಗಿದ್ದೇನೆ. ಗ್ರಾಮ ಮಟ್ಟದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವ ಕಂದಾಯ ಇಲಾಖೆ ನೌಕರರ ಸೇವೆ ಅನನ್ಯವಾಗಿದೆ ಎಂದರು.

ಸರ್ಕಾರದ ಪ್ರತಿಯೊಂದು ಕಾರ್ಯಕ್ರಮ ಮತ್ತು ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ಮುಟ್ಟಿಸುವ ಕಾರ್ಯ ಕಂದಾಯ ಇಲಾಖೆ ನೌಕರರಿಂದ ಆಗುತ್ತಿದೆ. ನೌಕರರ ಸಂಘದ ಬೇಡಿಕೆಗಳಿಗೆ ಸದಾ ಸ್ಪಂದನೆ ನೀಡುವ ಮೂಲಕ ನೌಕರರ ಮೇಲೆ ಯಾವುದೇ ಅನ್ಯಾಯವಾಗದಂತೆ ವಿಶ್ವಾಸಕ್ಕೆ ತೆಗೆದುಕೊಂಡು ಅವರ ಹಿತಾಸಕ್ತಿಗೆ ಬದ್ಧನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ತಮ್ಮಣ್ಣಗೌಡ, ನೂತನ ಅಧ್ಯಕ್ಷ ವಿ.ಎ.ಮುರಳೀಧರ ಅವರಿಗೆ ನೇಮಕಾತಿ ಆದೇಶ ನೀಡಿ ಸನ್ಮಾನಿಸಿದರು.

ಗ್ರೇಡ್ 2 ತಹಸೀಲ್ದಾರ್ ಸೋಮಶೇಖರ್, ಶಿರಸ್ತೇದಾರ್ ಲಕ್ಷ್ಮೀ ನರಸಿಂಹನ್, ಜಿಲ್ಲಾ ಕಾರ್ಯದರ್ಶಿ ಮಹೇಶ್, ಜಂಟಿ ಕಾರ್ಯದರ್ಶಿ ವೆಂಕಟೇಶ್, ಪ್ರಭು, ಸಂಘಟನಾ ಕಾರ್ಯದರ್ಶಿ ಕುಮಾರ್, ರಾಜಸ್ವ ನಿರೀಕ್ಷಕರಾದ ಮೋಹನ್, ಗಿರೀಶ್, ರವೀಂದ್ರ, ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಮಹಾಲಿಂಗಯ್ಯ, ಸಂಘಟನಾ ಕಾರ್ಯದರ್ಶಿ ಕೆ.ಆರ್.ಗೋವಿಂದರಾಜು ಹಾಗೂ ಗೋವರ್ಧನ್, ಮಹೇಶ್, ಮಹೇಂದ್ರ ಇದ್ದರು.