ಜಿಲ್ಲೆ

ರೈತರು, ಜನರಿಗೆ ಹತ್ತಿರವಾಗಿ ಕೆಲಸ ನಿರ್ವಹಿಸಿ

ಪಾಂಡವಪುರ: ಸರ್ಕಾರಿ ಕಚೇರಿಗಳು ಭ್ರಷ್ಟಮುಕ್ತವಾಗಿ ರೈತರು ಮತ್ತು ಜನ ಸಾಮಾನ್ಯರಿಗೆ ಹತ್ತಿರವಾಗಿ ಫಲಾಪೇಕ್ಷೆ ಇಲ್ಲದೆ ಕೆಲಸ ನಿರ್ವಹಿಸಬೇಕು ಎಂದು ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.


ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖಾವಾರು ಪ್ರಗತಿಯ ವರದಿ ಪಡೆದು ಮಾತನಾಡಿದರು. ಸರ್ಕಾರಿ ಇಲಾಖೆಯ ಯಾವುದೇ ಅಧಿಕಾರಿಗಳು ಅಥವಾ ನೌಕರರು ಜನರಲ್ಲಿ ಲಂಚಕ್ಕೆ ಬೇಡಿಕೆ ಇಡಬಾರದು. ಅಧಿಕಾರಿಗಳು ಇರುವುದು ಸಾರ್ವಜನಿಕರ ಕೆಲಸ ಮಾಡುವುದಕ್ಕಾಗಿ. ಪ್ರತಿಯೊಬ್ಬರೂ ಜನರ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ನಾನು ಯಾರ ಮೇಲೂ ಅಧಿಕಾರದ ದರ್ಪ ತೋರುವುದಿಲ್ಲ. ಅಧಿಕಾರಿಗಳು ನಿರ್ಭಯದಿಂದ ಕೆಲಸ ಮಾಡಲು ಸಹಕಾರ ನೀಡುತ್ತೇನೆ. ಆದರೆ ಭ್ರಷ್ಟಾಚಾರ ಎಸಗಿದರೆ ಮಾತ್ರ ಸಹಿಸುವುದಿಲ್ಲ. ಜನರು ಸರ್ಕಾರಿ ಕಚೇರಿಗಳಿಗೆ ಅಲೆಯದಂತೆ ಗೌರವದಿಂದ ಕೆಲಸ ಮಾಡಿಕೊಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.


ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು ಹೋಬಳಿ ಮಟ್ಟದಲ್ಲಿ ಜಾಗೃತಿ ಅಭಿಯಾನ ನಡೆಸಿ ಇಲಾಖೆಯಿಂದ ಲಭ್ಯವಿರುವ ಸೌಲಭ್ಯ ಹಾಗೂ ಬೆಳೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು. ರೈತರಿಗೆ ಇಲಾಖೆ ಸವಲತ್ತುಗಳ ಬಗ್ಗೆ ಮಾಹಿತಿ ಕೊರತೆ ಇದ್ದು, ಇದರ ಜತೆಗೆ ಸರ್ಕಾರದ ಎಲ್ಲ್ಲ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜಾಗೃತಿ ಅಭಿಯಾನದಲ್ಲಿ ನೀಡಬೇಕು ಎಂದು ತಾಕೀತು ಮಾಡಿದರು.


ಆರೋಗ್ಯ ಇಲಾಖೆ ಅಧಿಕಾರಿಗಳು ತಾಲೂಕಿನಲ್ಲಿ ಎಷ್ಟು ಆರೋಗ್ಯ ಕೇಂದ್ರ ಸುಸ್ಥಿತಿಯಲ್ಲಿವೆ?. ಅಗತ್ಯವಾಗಿ ಬೇಕಿರುವ ಸೌಲಭ್ಯಗಳೇನು? ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ವಿಸ್ತೃತ ವರದಿ ಸಲ್ಲಿಸಿ. ಪಟ್ಟಣದ ಉಪ ವಿಭಾಗೀಯ ಆಸ್ವತ್ರೆಯಲ್ಲಿ ನೂತನ ತಂತ್ರಜ್ಞಾನ ಆಳವಡಿಕೆ ಮಾಡಿಕೊಳ್ಳಿ. ಪ್ರತಿದಿನ ಎಷ್ಟು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ರೋಗಿಗಳಿಗೆ ಅಗತ್ಯವಿರುವ ಸೌಲಭ್ಯಗಳೇನು? ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಿ. ಆಸ್ಪತ್ರೆಗೆ ದಾಖಲಾದ ಪ್ರತಿಯೊಬ್ಬ ರೋಗಿಯ ವರದಿ ವಾರಕ್ಕೊಮ್ಮೆ ನೀಡಬೇಕು ಎಂದು ತಿಳಿಸಿದರಲ್ಲದೆ, ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲವೆಂಬ ದೂರುಗಳಿವೆ. ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿಪಡಿಸಿಕೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ತಿಳಿಸಿದರು.


ಮೇ 29ರಿಂದ ಸರ್ಕಾರಿ ಶಾಲೆಗಳು ಆರಂಭವಾಗುತ್ತಿದ್ದು, ಶಾಲೆಯ ಸಮಸ್ಯೆಗಳು ಇನ್ನೆರಡು ದಿನದಲ್ಲಿ ಸರಿಪಡಿಸಬೇಕು. ಶಿಕ್ಷಣ ಇಲಾಖೆ ಮಕ್ಕಳ ವಿದ್ಯಾಭ್ಯಾಸದ ಜತೆಗೆ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿ. ಚಾಮುಂಡೇಶ್ವರಿ ವಿದ್ಯುತ್ ಇಲಾಖೆಯಲ್ಲಿ ರೈತರಿಗೆ ಟಿ.ಸಿ. ಅಳವಡಿಸಿಕೊಳ್ಳಲು ಸತಾಯಿಸುತ್ತಾರೆ ಎಂಬ ಆರೋಪವಿದೆ. ಇನ್ನು ಮುಂದೆ ಎಚ್ಚರಿಕೆ ಕೆಲಸ ಮಾಡಿ. ಕ್ಷೇತ್ರಕ್ಕೆ ವಿದ್ಯುತ್ ಸಬ್‌ಸ್ಟೇಷನ್ ಅಗತ್ಯವಿದ್ದು, ಈ ಸಂಬಂಧ ಯೋಜನೆ ರೂಪಿಸಿ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದರೆ, ಸರ್ಕಾರದೊಂದಿಗೆ ಮಾತನಾಡಿ ಯೋಜನೆ ಅನುಷ್ಠಾನಕ್ಕೆ ತರಲು ಶ್ರಮಿಸುವುದಾಗಿ ಭರವಸೆ ನೀಡಿದರು.


ಪ್ರತಿಹಳ್ಳಿಯಲ್ಲೂ ಅಕ್ರಮ ಮದ್ಯ ಮಾರಾಟ ಸಂಪೂರ್ಣವಾಗಿ ಸ್ಥಗಿತವಾಗುವಂತೆ ಅಬಕಾರಿ ಹಾಗೂ ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದ ದರ್ಶನ್ ಪುಟ್ಟಣ್ಣಯ್ಯ, ಪೊಲೀಸ್ ಅಧಿಕಾರಿಗಳು ಮಾನವೀಯತೆ ದೃಷ್ಟಿಯಿಂದ ಕೆಲಸ ಮಾಡಬೇಕು. ಸಣ್ಣಪುಟ್ಟ ಗಲಾಟೆಗೆ ಪ್ರಕರಣ ದಾಖಲಿಸದೇ ತಮ್ಮ ಮಟ್ಟದಲ್ಲೇ ಬುದ್ಧಿ ಹೇಳುವ ಕೆಲಸ ಮಾಡಿ ಎಂದು ತಾಕೀತು ಮಾಡಿದರು. ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನಲ್ಲಿ ಎಷ್ಟು ಕೆಲಸವಾಗಿದೆ? ಯಾವ ಯಾವ ಕೆಲಸ ನಡೆಯುತ್ತಿದೆ? ಅನುದಾನಗಳ ಬಗ್ಗೆ ಮಾಹಿತಿ ನೀಡಿ ಎಂದರು.


ನೀರಾವರಿ ಇಲಾಖೆಯ ಅಧಿಕಾರಿಗಳು ರೈತಪರವಾಗಿ ಕೆಲಸ ಮಾಡಿ, ದಬ್ಬಾಳಿಕೆಗೆ ನಮ್ಮಲ್ಲಿ ಅವಕಾಶವಿಲ್ಲ ಎಂದರಲ್ಲದೆ, ಅರಣ್ಯ ಇಲಾಖೆ ಮುಂದಿನ ಪೀಳಿಗೆಗೆ ಭವಿಷ್ಯ ನೀಡುವ ಇಲಾಖೆ. ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಕೈ ಜೋಡಿಸಿ ಎಂದು ಕಿವಿಮಾತು ಹೇಳಿದರು.


ಆಹಾರ ಇಲಾಖೆ ಅಧಿಕಾರಿಗಳು ಸರ್ಕಾರದಿಂದ ಬರುವಂತಹ ಪಡಿತರ ಜನರಿಗೆ ಸರಿಯಾಗಿ ತಲುಪಿಸುವ ಕೆಲಸ ಮಾಡಬೇಕು. ಕಂದಾಯ ಇಲಾಖೆ ಭ್ರಷ್ಟಾಚಾರದಿಂದ ಮುಳುಗಿದೆ ಎಂಬ ಆರೋಪವಿದೆ. ಇದಕ್ಕೆ ಕಡಿವಾಣ ಹಾಕುವಂತೆ ತಹಸೀಲ್ದಾರ್ ಸೌಮ್ಯ ಅವರಿಗೆ ಸೂಚನೆ ನೀಡಿದರು.


ಸಭೆಯಲ್ಲಿ ತಾಲೂಕು ಪಂಚಾಯಿತಿ ಇಒ ಲೋಕೇಶ್‌ಮೂರ್ತಿ, ಸೆಸ್ಕ್ ಎಇಇ ವಿ.ಪುಟ್ಟಸ್ವಾಮಿ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಇದ್ದರು.