ಬೀದರ್: ತಾಲೂಕಿನ ಜನವಾಡ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ)ದಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಹೈನುಗಾರಿಕೆ ಕುರಿತು ಮೂರು ದಿನಗಳ ತರಬೇತಿ ಜರುಗಿತು.
ಹೆಚ್ಚು ಹಾಲು ಕೊಡುವ ಸಾಮಥ್ರ್ಯವುಳ್ಳ ವಿವಿಧ ಆಕಳು ಮತ್ತು ಎಮ್ಮೆ ತಳಿಗಳು, ಗರ್ಭ ಧರಿಸಿದ ಹೈನು ರಾಸುಗಳ ಮತ್ತು ಕರುಗಳ ಪಾಲನೆ, ಜಾನುವಾರುಗಳ ಆರೋಗ್ಯ ನಿರ್ವಹಣೆಯಲ್ಲಿ ಸಮತೋಲನ ಪಶು ಆಹಾರದ ಮಹತ್ವ, ಜಾನುವಾರುಗಳಲ್ಲಿ ಬರುವ ರೋಗ ಹಾಗೂ ಹತೋಟಿ ಕ್ರಮ, ವೈಜ್ಞಾನಿಕ ಕೊಟ್ಟಿಗೆ ನಿರ್ಮಾಣ, ಸುಧಾರಿತ ಮೇವಿನ ಬೆಳೆಗಳ ಉತ್ಪಾದನೆ, ವಿಮೆ, ಶುದ್ಧ ಹಾಲು ಉತ್ಪಾದನೆ, ಹಾಲಿನ ಮೌಲ್ಯವರ್ಧನೆ ಮತ್ತು ಹಾಲಿನಿಂದ ಬರುವ ವಿವಿಧ ಉತ್ಪನ್ನಗಳು ಮತ್ತು ಅವುಗಳ ಮಹತ್ವ ಮುಂತಾದ ವಿಷಯಗಳ ಕುರಿತು ತಜ್ಞ ವಿಜ್ಞಾನಿ ಹಾಗೂ ಪ್ರಗತಿಪರ ರೈತರಿಂದ ತರಬೇತಿ ಕೊಡಲಾಯಿತು.
ಬೀದರ್ ಹಾಲು ಉತ್ಪಾದಕ ಸಹಕಾರ ಸಂಸ್ಥೆ (ಕೆಎಂಎಫ್) ಹಾಗೂ ಮಾದರಿ ಡೇರಿ ಕೇಂದ್ರದ ಕ್ಷೇತ್ರ ಭೇಟಿ ಹಮ್ಮಿಕೊಳ್ಳಲಾಗಿತ್ತು. ತರಬೇತಿಯಲ್ಲಿ 35 ಯುವ ರೈತರು ಭಾಗವಹಿಸಿದ್ದರು.
ತರಬೇತಿಗೆ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ದಿಲೀಪಕುಮಾರ ಚಾಲನೆ ನೀಡಿದರು. ಸಮಾರೋಪದಲ್ಲಿ ಎಲ್ಲ ಶಿಬಿರಾರ್ಥಿಗಳಿಗೆ ಕೆವಿಕೆ ಮುಖ್ಯಸ್ಥ ಡಾ. ಸುನೀಲಕುಮಾರ ಅವರು ಪ್ರಮಾಣಪತ್ರ ವಿತರಿಸಿದರು. ತರಬೇತಿ ಸಂಯೋಜಕ, ಕೆವಿಕೆ ವಿಜ್ಞಾನಿ ಡಾ.ಅಕ್ಷಯಕುಮಾರ, ಪ್ರಕಾಶ ರಾಠೋಡ್, ಜೈಶ್ರೀ ಇತರರಿದ್ದರು.