ಜಿಲ್ಲೆ

ರೈತರಿಗೆ ಸ್ಪಂದಿಸುವ ಸರ್ಕಾರ ತರಲು ಕರೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ರೈತರು ಸಂಕಷ್ಟದಲ್ಲಿದ್ದರೂ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುತ್ತಿಲ್ಲ. ಕರ್ನಾಟಕದಲ್ಲಿ ಈ ಹಿಂದೆ ನಡೆಸಿದ್ದ ಎದ್ದೇಳು ಕರ್ನಾಟಕ ಎಂಬ ಅಭಿಯಾನದಂತೆ ಎದ್ದೇಳು ಭಾರತ ಎಂಬ ಅಭಿಯಾನ ಮೂಲಕ ಬಿಜೆಪಿ ಸರ್ಕಾರ ಕಿತ್ತೊಗೆದು, ರೈತರಿಗೆ ಸ್ಪಂದಿಸುವ ಹೊಸ ಸರ್ಕಾರ ತರಬೇಕು ಎಂದು ಮಾಜಿ ಸಂಸದ ವಡ್ಡೆ ಶೋಭನಾಧೀಶ್ವರ ರಾವ್ ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಗರದ ರಪಾಟಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ 43ನೇ ರೈತ ಹುತಾತ್ಮ ದಿನಾಚರಣೆ ಹಾಗೂ ರೈತ ಚಳವಳಿಯ ಮುಂದಿನ ಹೋರಾಟದ ಘೋಷಣಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮಾರುಕಟ್ಟೆಯಲ್ಲಿನ ಎಲ್ಲ ವಸ್ತುಗಳಿಗೆ ಎಂಆರ್‌ಪಿ ನಿಗದಿ ಮಾಡಲಾಗಿದೆ. ಆದರೆ ರೈತರ ಬೆಳಗಳಿಗೆ ಮಾತ್ರ ಎಂಆರ್‌ಪಿ ನಿಗದಿ ಆಗಿಲ್ಲ. ಹೀಗಾಗಿ ಸ್ವಾಮಿನಾಥನ್ ಆಯೋಗದ ವರದಿ ಅನ್ವಯ ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರ ಉತ್ಪನ್ನಗಳನ್ನು ಸಂಪೂರ್ಣವಾಗಿ ಕೊಳ್ಳುವ ವ್ಯವಸ್ಥೆ ರೂಪಿಸಬೇಕು ಎಂದರು.
ಕರ್ನಾಟಕದಲ್ಲಿ ಬಿಜೆಪಿ ಸೋಲಿಸಿದ್ದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಕೇಂದ್ರದಲ್ಲೂ ಬಿಜೆಪಿ ಪ್ರಭುತ್ವ ಅಂತ್ಯಗೊಳಿಸಬೇಕು. ಅದಕ್ಕಾಗಿ ಪ್ರತಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಬೇಕು. ರೈತರ ಸಾಲ ಮನ್ನಾ ಮಾಡುವಲ್ಲಿ ನಿರಾಸಕ್ತಿ ಹೊಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಪೋರೇಟ್ ಕಂಪನಿಗಳ ಕೋಟ್ಯಂತರ ರೂ. ಸಾಲ ಮನ್ನಾ ಮಾಡುವ ಮೂಲಕ ತಮಗೆ ರೈತರ ಬಗ್ಗೆ ಇರುವ ಕಾಳಜಿ ಪ್ರದರ್ಶಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಬಳ ಸಾಕಷ್ಟು ಹೆಚ್ಚಳವಾಗುತ್ತಿದೆ. ಅದರಂತೆ ರೈತನ ಆದಾಯವನ್ನೂ ದ್ವಗುಣ ಮಾಡುತ್ತೇವೆ ಎಂದು ಹೇಳಿದ್ದ ಕೇಂದ್ರ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಆದಾಯದ ಬದಲು ಸಾಲದ ಸುಳಿಯಲ್ಲಿ ರೈತ ಸಿಲುಕಿ ಆತ್ಮಹತ್ಯೆಗೆ ಶರಣಾಗುವ ಸ್ಥಿತಿಗೆ ತಂದಿದ್ದಾರೆ ಎಂದು ದೂರಿದರು.
ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲೀ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ವಿಧಾನಸಭೆ ಚುನಾವಣೆ ಸಂಸರ್ಭದಲ್ಲಿ ರೈತ ಸಂಘಕರೆ ಕೊಟ್ಟಂತೆ ಬಿಜೆಪಿ ಸೋಲಿಸಲಾಗಿದೆ. ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕೇಂದ್ರ ಸರ್ಕಾರಕ್ಕೆ ಈ ಬಾರಿ ತಕ್ಕ ಪಾಠ ಕಲಿಸಬೇಕು. ಹೀಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸಬೇಕು ಎಂದರು.
ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ರೈತರ ಎಲ್ಲ ಬೇಡಿಕೆ ಈಡೇರಿಸುತ್ತದೆ ಎಂಬ ನಂಬಿಕೆ ಇಲ್ಲ. ಜನಪರ ಕೆಲಸ ಮಾಡದಿದ್ದರೆ ಅವರ ವಿರುದ್ಧವೂ ಹೋರಾಟ ನಡೆಸಲಾಗುವುದು. ರೈತರು ಗ್ರಾಪಂನಿಂದ ವಿಧಾನಸೌಧವರೆಗೆ ಅಧಿಕಾರ ಹಿಡಿದು ರಾಜಕೀಯ ಶಕ್ತಿಯಾಗಿ ಬೆಳೆಯಬೇಕು. ನರೇಂದ್ರ ಮೋದಿ ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಕೃಷಿ ಬಿಟ್ಟು ಭಿಕ್ಷೆ ಬೇಡುವಂತಾಗುತ್ತದೆ. ಹೀಗಾಗಿ ಈ ಬಾರಿ ತಕ್ಕ ಪಾಠ ಕಲಿಸಬೇಕು ಎಂದರು.
ಸಮಾವೇಶದಲ್ಲಿ ಒಟ್ಟು 16 ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಟಿ. ನುಲೇನೂರ ಶಂಕರಪ್ಪ, ರವಿಕಿರಣ ಪೂಣಚ್, ಪಿ. ಗೋಪಾಲ, ಅಲ್ಲಂವೀರಭದ್ರಪ್ಪ, ಪ್ರಸನ್ನ ಗೌಡ, ವೆಂಕನಗೌಟ ಪಾಟೀಲ, ಇತರರು ಇದ್ದರು.