ಮೈಸೂರು: ಬಡ ರೈತರಿಗೆ ಸಾಗುವಳಿ ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಗುರುವಾರ ಪ್ರತಿಭಟನೆ ನಡೆಯಿತು.
ನಗರದ ತಹಸೀಲ್ದಾರ್ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಭೂಮಿ, ಗೋಮಾಳ, ನಗರ ಪ್ರದೇಶದಿಂದ 10 ಕಿ.ಮೀ. ವ್ಯಾಪ್ತಿಯ ತುಂಡು ಭೂಮಿಯಲ್ಲಿ ಕಳೆದ 5-6 ದಶಕಗಳಿಂದ ಸಾಗುವಳಿ ಮಾಡುತ್ತಿದ್ದು, ಗೋಮಾಳ, ಗುಂಡು ತೋಪು, ಅರಣ್ಯ ಭೂಮಿಗಳಲ್ಲಿ ಬಡ ಬಗರ್‌ಹುಕುಂ ಸಾಗುವಳಿದಾರರು ಉಳುಮೆ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಇವರಿಗೆ ಸಾಗುವಳಿ ಪತ್ರ ನೀಡದೆ ಕಾನೂನಿನ ತೊಡಕಿನ ನೆಪ ಹೇಳಿ ವಂಚಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಕೈಗಾರಿಕೆಗಳಿಗೆ, ಸಂಘ, ಸಂಸ್ಥೆಗಳಿಗೆ ಮಾತ್ರ ರೈತರು ಸಾಗುವಳಿ ಮಾಡುತ್ತಿರುವ ಭೂಮಿ ನೀಡಲಾಗುತ್ತಿದೆ. ಆಗ ಅಡ್ಡಿಯಾಗದ ಕಾನೂನು ಬಡ ರೈತರಿಗೆ ಸಾಗುವಳಿ ನೀಡಲು ಅಡ್ಡಿಯಾಗುತ್ತಿರುವುದು ರೈತ ವಿರೋಧಿ ಧೋರಣೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹಸುಗಳಿಗೆ ಗೋಮಾಳ ಇರಬೇಕೆಂಬ ಕಾರಣ ಹೇಳಿ ಸಾಗುವಳಿ ವಂಚಿಸಲಾಗುತ್ತಿದೆ. ಆದರೆ 100 ಹಸುಗಳಿಗೆ 30 ಎಕರೆ ಜಮೀನು ಬಿಟ್ಟು ಉಳಿದ ಜಮೀನನ್ನು ರೈತರಿಗೆ ನೀಡುವ ಅವಕಾಶವಿದೆ. ಆದರೆ ಸ್ಥಳೀಯ ಅಧಿಕಾರಿಗಳು ಇದರ ಬಗ್ಗೆ ಗಮನ ನೀಡುತ್ತಿಲ್ಲ. ಮತ್ತೊಂದೆಡೆ ಅರಣ್ಯ ಭೂಮಿಗಳಲ್ಲಿ 50-60 ವರ್ಷಗಳಿಂದ ಸಾಗುವಳಿಗೆ ಅರ್ಜಿ ಸಲ್ಲಿಸಿ ರೈತರು ಬೇಸಾಯ ಮಾಡುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಇತ್ತೀಚೆಗೆ ರೈತರಿಗೆ ನೋಟಿಸ್ ನೀಡಿ ಉಳುಮೆ ಮಾಡುತ್ತಿರುವ ಭೂಮಿಗೆ ದಾಖಲೆ ಕೇಳುತ್ತಿದೆ. ಒತ್ತುವರಿ ತೆರವು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ನಗರ ವ್ಯಾಪ್ತಿ ವಿಸ್ತರಣೆಯಾಗುತ್ತಿರುವುದು, ನಗರ ಸಭೆ, ಪುರಸಭೆಗಳು ರಚನೆಯಾಗಿರುವುದರಿಂದ ಈ ರೈತರು ಸಾಗುವಳಿಯಿಂದ ವಂಚಿತರಾಗಿದ್ದಾರೆ. ಬಡ ರೈತರಿಗೆಲ್ಲ ಈ ಭೂಮಿಯೇ ಜೀವನಾಧಾರವಾಗಿರುವುದರಿಂದ ಇವರಿಗೆ ಸಾಗುವಳಿ ಪತ್ರ ನೀಡಬೇಕು. ತಕ್ಷಣವೇ ದರಕಾಸ್ತು ಸಮಿತಿ ರಚಿಸಿ ಬಾಕಿ ಇರುವ ಅರ್ಜಿವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಗೋಮಾಳ, ಅರಣ್ಯ ಭೂಮಿ, ಸರ್ಕಾರಿ ಜಾಗಗಳಲ್ಲಿ ಕಳೆದ 50-60 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಬಡ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡಬೇಕು. ತಾಲೂಕಿನ ಎಲ್ಲ ಗ್ರಾಮಗಳಲ್ಲಿರುವ ಗೋವುಗಳ ಸಮೀಕ್ಷೆ ಸಾಗುವಳಿ ಮಾಡುತ್ತಿರುವ ರೈತರಿಗೆ ಹಂಚಲು ಕ್ರಮವಹಿಸಬೇಕು.
ಆದಿವಾಸಿಯೇತರ ಅರಣ್ಯ ಭೂಮಿ ಬಡ ಸಾಗುವಳಿದಾರರಿಗೆ ಹಕ್ಕು ಪತ್ರ ದೊರೆಯುವಂತೆ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಗೆ ತಿದ್ದುಪಡಿ ಮಾಡಬೇಕು. ನಗರ ಮಿತಿಯನ್ನು 10 ಕಿ.ಮೀ.ಗಿಂತಲೂ ಕಡಿಮೆ ಮಾಡಬೇಕು. ಬಡ ರೈತರಿಗೆ ಸಾಗುವಳಿ ನೀಡಲು ಅಡ್ಡಿ ಇರುವ ಕಾನೂನಿಗೆ ತಿದ್ದಪಡಿ ಮಾಡಿ ಸಾಗುವಳಿ ಪತ್ರ ನೀಡಬೇಕು.
ಕೂಡಲೇ ಅಕ್ರಮ-ಸಕ್ರಮ ಸಮಿತಿ ರಚಿಸಿ ಸಾಗುವಳಿ ಅರ್ಜಿಗಳನ್ನು ಇತ್ಯರ್ಥ ಮಾಡಬೇಕು. ತಾಲೂಕಿನ ಎಲ್ಲ ಜಮೀನುಗಳನ್ನು ಹದ್ದಬಸ್ತು ಮಾಡಿಸಿ, ಪಕ್ಕಾಪೋಡು ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು
ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ತಾಲೂಕಾಧ್ಯಕ್ಷ ದೂರ ಲೋಕೇಶ್, ಕಾರ್ಯದರ್ಶಿ ಮಹೇಶ್ ಜಯಪುರ, ಮುಖಂಡರಾದ ಕೆಂಪಯ್ಯ, ಚೌಡಮ್ಮ, ಕೆಂಪಮ್ಮ, ಶಿವಪ್ಪ ಆಯರಳ್ಳಿ ಸಣ್ಣನಾಯ್ಕ, ಪುಟ್ಟರಾಚ, ನಾರಾಯಣ, ಸತೀಶ್, ತೋಟಪ್ಪ, ನಿಂಗಮ್ಮ, ರೇಖಾ, ಸಾಮಿತ್ರಮ್ಮ, ರಂಗಸ್ವಾಮಿ ಇನ್ನಿತರರಿದ್ದರು.