ಹೊಸಕೋಟೆ: ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸಲ್ಲ, ಸಣ್ಣ ವಿಷಯಗಳಿಗೂ ತಿಂಗಳುಗಟ್ಟಲೆ ಅಲೆದಾಡಿಸುತ್ತಾರೆ, ಎಸಿ ಕೋರ್ಟ್‌ನಲ್ಲಿ ಪ್ರಕರಣಗಳು ಶೀಘ್ರ ಇತ್ಯರ್ಥವಾಗುತ್ತಿಲ್ಲ, ಸರ್ಕಾರಿ ಭೂಮಿಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿರುವವರ ವಿರುದ್ಧ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜವಾಗುತ್ತಿಲ್ಲ, ರೈತರಿಗೆ ಸರ್ವೇಯರ್‌ಗಳೇ ಸಿಗುತ್ತಿಲ್ಲ, ಇನ್ನು ಜಮೀನುಗಳ ಸರ್ವೇ ಮಾಡೋರ‌್ಯಾರು...?
ನಗರದ ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ ಆಯೋಜಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಕೇಳಿಬಂದ ಪ್ರಮುಖ ದೂರುಗಳು ಇವು.
2 ಗಂಟೆಗೂ ಹೆಚ್ಚು ಕಾಲ ನಡೆದ ಕುಂದುಕೊರತೆ ಸಭೆಯಲ್ಲಿ ನೂರಾರು ಸಾರ್ವಜನಿಕರು ಪಾಲ್ಗೊಂಡು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು, ಅನೇಕರು ಅರ್ಜಿ ರೂಪದಲ್ಲಿ ದೂರುಗಳನ್ನು ನೀಡಿ ಸಮಸ್ಯೆ ಪರಿಹರಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸಿಬಿ ಡಿಎಸ್‌ಪಿ ಗೋಪಾಲ್, ಸಬೆಯಲ್ಲಿ ವ್ಯಕ್ತವಾದ ಎಲ್ಲ ದೂರುಗಳ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟವರ ವಿಚಾರಣೆ ನಡೆಸಿ ಕ್ರಮಕೈಗೊಳ್ಳಲಾಗುವುದು, ಹಾಗೆಯೇ ಶೀಘ್ರ ಸಮಸ್ಯೆ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಲು ಪ್ರಯತ್ನಿಸಬೇಕು, ಭ್ರಷ್ಟಾಚಾರದ ಬಗ್ಗೆ ದೂರು ಬರದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಗುರುತಿನ ಚೀಟಿ ಕಡ್ಡಾಯ: ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕು, ಪ್ರತಿ ಸರ್ಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ನಿಗ್ರಹದಳದ ವಿಳಾಸ ಹಾಗೂ ದೂರವಾಣಿ ಸಂಖ್ಯೆಯ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಗೋಪಾಲ್ ಸೂಚಿಸಿದರು.
ಕಳೆದ ಬಾರಿ ಸಾರ್ವಜನಿಕರು ನೀಡಿದ್ದ ದೂರುಗಳ ಪೈಕಿ ಬಗೆಹರಿಸಿದ ಪ್ರಕರಣಗಳನ್ನು ಹೊರತುಪಡಿಸಿ ಇನ್ನೇರೆಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಕೋರಲಾಗಿದೆ, ಸಮಸ್ಯೆ ಕಂಡುಬಂದಲ್ಲಿ ಉನ್ನಾತಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.
ಆತಂಕ ಬೇಡ: ಯಾವ ಕಚೇರಿಯಲ್ಲಿ ಸಭೆ ನಡೆಯುತ್ತದೋ ಅಲ್ಲಿಗೆ ಸಂಬಂಧಪಟ್ಟಂತಹ ವಿಷಯಗಳ ಬಗ್ಗೆಯೇ ದೂರುಗಳು ಬರುತ್ತಿವೆ. ಈ ಸಭೆ ಎಲ್ಲ ಇಲಾಖೆಗೂ ಅನ್ವಯಿಸುತ್ತದೆ. ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಸಭೆಯಲ್ಲಿ ದೂರು ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದರು.