ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಸಮರ್ಪಕ ವಿದ್ಯುತ್ ಪೂರೈಕೆ ಮತ್ತು ನಿರ್ವಹಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.  
ಜಿಲ್ಲೆ

ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಿ

ಬಾಗಲಕೋಟೆ: ವಿದ್ಯುತ್ ಪೂರೈಕೆಯಲ್ಲಿ ಆಗುವ ತೊಂದರೆಗಳನ್ನು ಸರಿಪಡಿಸುವ ಮೂಲಕ ಜಿಲ್ಲೆಯ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅಽಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಸಮರ್ಪಕ ವಿದ್ಯುತ್ ಪೂರೈಕೆ ಮತ್ತು ನಿರ್ವಹಣೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ಪ್ರದೇಶಗಳಲ್ಲಿ ಅನಗತ್ಯವಾಗಿ ಬೀದಿ ದೀಪ ಉರಿಸುವುದು ತಡೆಯುವ ಮೂಲಕ ವಿದ್ಯುತ್ ನಿರ್ವಹಣೆ ಮಾಡಿ ರೈತರ ವಿದ್ಯುತ್ ಸಮಸ್ಯೆ ನಿವಾರಿಸುವ ಕಾರ್ಯವಾಗಬೇಕು ಎಂದರು.

ನಾಡಿಗೆ ಅನ್ನ ನೀಡುವರೇ ರೈತರಾಗಿದ್ದು, ಅವರ ಬೆಳೆಗಳಿಗೆ ಸಮರ್ಪಕವಾದ ವಿದ್ಯುತ್ ವಿತರಿಸದಿದ್ದಲ್ಲಿ ಬೆಳೆ ಹಾಳಾಗುತ್ತದೆ. ಇದರಿಂದ ರೈತ ತೊಂದರೆಗೆ ಒಳಗಾಗುತ್ತಾನೆ. ಇದನ್ನು ಮನಗಂಡು ಸಮರ್ಪಕ ನಿರ್ವಹಣೆ ಮಾಡುವ ಮೂಲಕ ರೈತರಿಗೆ ವಿದ್ಯುತ್ ಪೂರೈಸಲು ಮಂದಾಗಬೇಕು. ಜಿಲ್ಲೆಯ ವಜ್ರಮಟ್ಟಿ ಮತ್ತು ಮಹಾಲಿಂಗಪುರ ಪ್ರದೇಶಗಳಲ್ಲಿ ಪದೇ ಪದೇ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎಂಬ ದೂರುಗಳು ಕೇಳಿ ಬರುತ್ತಿದ್ದು, ಆದ್ಯತೆಯ ಮೇರೆಗೆ ಇಲ್ಲಿನ ರೈತರಿಗೆ ವಿದ್ಯುತ್ ವಿತರಿಸುವ ಕಾರ್ಯ ಆಗಬೇಕು ಎಂದು ಸೂಚನೆ ನೀಡಿದರು.

ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಕೈಗಾರಿಕೆಗಳಿಗೆ ನೂರಕ್ಕೆ ನೂರರಷ್ಟು ವಿದ್ಯುತ್ ನೀಡಲಾಗುತ್ತದೆ. ಅದೇ ರೀತಿ ರೈತರಿಗೂ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಕ್ರಮವಹಿಸಬೇಕು. ಎಲ್ಲರಿಗೂ ನೀಡುವಲ್ಲಿ ತೊಂದರೆಯಾಗುತ್ತದೆ ಎಂದಾದಲ್ಲಿ ಪರ್ಯಾಯ ಮಾರ್ಗೋಪಾಯಗಳನ್ನು ಹುಡುಕಿ ರೈತರಿಗೆ ಸಮರ್ಪಕ ವಿದ್ಯುತ್ ವಿತರಿಸಬೇಕು. ಯಳ್ಳಿಗುತ್ತಿ ಗ್ರಾಮ, ಛಬ್ಬಿ ಕ್ರಾಸ್ ಹತ್ತಿರ ೪೦ ಮನೆಗಳಿಗೆ, ಹಳೇ ಸಾಲಗುಂದಿ, ಇನಾಂ ಹುಲ್ಲಿಕೇರಿ ಪ್ಲಾಟ್‌ನಲ್ಲಿರುವ ಮನೆಗಳಿಗೆ ನಿರಂತರ ಜ್ಯೋತಿ ತುರ್ತಾಗಿ ಒದಗಿಸುವಂತೆ ನಿರ್ದೇಶನ ನೀಡಿದರು.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ ರೋಷನ ಮಾತನಾಡಿ, ಜಿಲ್ಲೆಯ ಐಪಿ ಮಾರ್ಗಗಳಿಗೆ ಸರ್ಕಾರದ ನಿರ್ದೇಶನದಂತೆ ೭ ಗಂಟೆ ೩ ಫೇಸ್ ವಿದ್ಯುತ್ ಪೂರೈಸಲು ಪ್ರತಿ ದಿನ ಸರಿ ಸುಮಾರು ೬೬೮ ಮೇಗಾ ವ್ಯಾಟ್/೧೧ ಮಿ.ಯು ವಿದ್ಯುತ್ ಅವಶ್ಯಕತೆ ಇರುತ್ತದೆ. ಆದರೆ ಸದ್ಯದ ಸ್ಥಿತಿಯಲ್ಲಿ ೨೯೫ ರಿಂದ ೩೦೦ ಮೇಗಾ ವ್ಯಾಟ್/೬ ರಿಂದ ೭ ಮಿಲಿಯನ್ ಯುನಿಟ್‌ಗಳಷ್ಟು ವಿದ್ಯುತ ಹಂಚಿಕೆ ಮಾಡಲಾಗುತ್ತಿದೆ. ಮಳೆಯ ಕೊರತೆ, ಜಲ ವಿದ್ಯುತ್, ಪವನ್ ಮತ್ತು ಸೋಲಾರ ವಿದ್ಯುತ್ ಉತ್ಪಾದನೆ ಕುಂಟಿತಗೊಂಡಿದೆ. ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ದುರಸ್ತಿ ಕಾಮಗಾರಿಗಳಿಂದಾಗಿ ಮತ್ತು ವಿದ್ಯುತ್ ಖರೀದಿಸಲು ರಾಜ್ಯ, ದೇಶದಲ್ಲಿ ವಿದ್ಯುತ್ ಅಲಭ್ಯತೆಯಿಂದಾಗಿ ೭ ಗಂಟೆ ವಿದ್ಯುತ್‌ನ್ನು ನೀರಾವರಿ ಪಂಪ ಸೆಟ್‌ಗಳಿಗೆ ಪೂರೈಸಲು ಕಷ್ಟಸಾಧ್ಯವಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ, ಕೆಪಿಟಿಸಿಎಲ್ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಕಾಶಿನಾಥ ಹಿರೇಮಠ, ಹೆಸ್ಕಾಂ ಬೆಳಗಾವಿ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಪಿ.ಪ್ರಕಾಶ, ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರ ಜಿ.ಕೆ.ಗೋಟ್ಯಾಳ, ಬಾಗಲಕೋಟೆ ಹೆಸ್ಕಾಂ ಅಧೀಕ್ಷಕ ಅಭಿಯಂತರ ಕಲಿಂ ಅಹಮ್ಮದ ಸೇರಿದಂತೆ ಇತರರು ಇದ್ದರು.