ಸಿದ್ಧಲಿಂಗಯ್ಯ ಸ್ವಾಮಿ ಮಲಕೂಡ: ಇಲ್ಲಿನ ಎಪಿಎಂಸಿ ಆವರಣದಲ್ಲಿ ಪ್ರತಿ ಮಂಗಳವಾರ ನಡೆಯುತ್ತಿದ್ದ ಜಾನುವಾರು ಸಂತೆಗೆ ಕರೊನಾ ಹಾವಳಿಯಿಂದಾಗಿ ಸಕರ್ಾರ ಕಡಿವಾಣ ಹಾಕಿತ್ತು. ಹಾಗಾಗಿ ಸುಮಾರು ಐದು ತಿಂಗಳಿನಿಂದ ಈ ಆವರಣಕ್ಕೆ ಬೀಗ ಹಾಕಲಾಗಿತ್ತು.
ಆದರೆ ಇದೀಗ ಮುಂಗಾರು ಬೆಳೆಗಳಾದ ಹೆಸರು ರಾಶಿ ನಡೆಯುವ ಸಂದರ್ಭದಲ್ಲಿ ಎಡಬಿಡದ ಮಳೆಯಿಂದಾಗಿ ತೊಯ್ದು ಹೋದ ಹೆಸರು ರಾಶಿ ಮಾಡುತ್ತಿರುವ ರೈತರಿಗೆ ಹೆಸರು ಕಾಳು ಒಣಗಿಸಲು ಸ್ಥಳಾವಕಾಶ ಇಲ್ಲದಂತಾಗಿತ್ತು. ಹೀಗಾಗಿ ರೈತ ಮುಖಂಡ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಅಶೋಕ ಬಂಡಿ, ಎಪಿಎಂಸಿ ಸದಸ್ಯ ನಾಗೇಶ ಹಲಗೇರಿ, ಗ್ರಾಪಂ ಮಾಜಿ ಅಧ್ಯಕ್ಷ ರಾಜಶೇಖರ ಪುರಾಣಿಕ ಹಾಗೂ ಕೆಲ ರೈತರು ಸೇರಿ ಎಪಿಎಂಸಿ ಅಧ್ಯಕ್ಷರಿಗೆ ಮನವಿ ಮಾಡಿದಾಗ, ಮನವಿಗೆ ಸ್ಪಂದಿಸಿದ ಅಧ್ಯಕ್ಷ ಸಿದ್ದು ಬಾನರ್ ಎಪಿಎಂಸಿ ಆವರಣದಲ್ಲಿ ಹೆಸರು ಕಾಳು ಒಣಗಿಸಲು ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆ. ಆವರಣದಲ್ಲಿ ವ್ಯವಸ್ಥಿತವಾದ ಸಿಸಿ ರಸ್ತೆ ಇದ್ದು, ಅದರ ಮೇಲೆ ಹೆಸರು ಕಾಳು ಒಣಗಿಸುವ ಕಾರ್ಯ ನಡೆದಿದೆ.
ಹೆಸರು ರಾಶಿ ಮಾಡುವಾಗ ಸುರಿಯುತ್ತಿರುವ ಜಿಟಿ, ಜಿಟಿ ಮಳೆಯಿಂದಾಗಿ ರೈತರು ಕಂಗಾಲಾಗಿದ್ದರೆ. ಜೂನ್ನಲ್ಲಿ ಉತ್ತಮ ಮಳೆಯಾಗಿದ್ದರಿಂದ ಶೇ. 65 ಹೆಸರು ಬಿತ್ತನೆ ಮಾಡಿದ ರೈತರು ಇದೀಗ ಮಳೆಯಿಂದಾಗಿ ರಾಶಿ ಮಾಡಲು ಒದ್ದಾಡುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ರೈತರ ಪರಿಸ್ಥಿತಿ. ಅದಕ್ಕಾಗಿ ಸರ್ಕಾರ ಅತಿವೃಷ್ಠಿಯಿಂದ ಹಾನಿಗೊಳಗಾದ ಬೆಳೆ ಸಮೀಕ್ಷೆ ಮಾಡಿ ನಷ್ಟ ಅನುಭವಿಸುತ್ತಿರುವ ರೈತರ ಸಹಾಯಕ್ಕೆ ಮುಂದೆ ಬರಬೇಕಾಗಿದೆ ಎಂದು ರೈತರಾದ ರವಿಕುಮಾರ ತೇಗಲತಿಪ್ಪಿ, ದೇವಾನಂದ ಪಿಲ್ಲಿ, ಶರಣಬಸ್ಸಪ್ಪ ಧಾರಕ, ಸಾಬಣ್ಣ ಹೂಡಾ, ರಮೇಶ ಮಾಲಿಪಾಟೀಲ್, ದೇವಿಂದ್ರಪ್ಪ ಗೌಡಪ್ಪಗೌಡ, ದೇವಿಂದ್ರ ಮಂಗಾ ಮನವಿ ಮಾಡಿದ್ದಾರೆ.
ರೈತರು ಬೆಳೆದ ಬೆಳೆ ಹಾನಿಗೊಳಗಾಗದಂತೆ ಕಾಪಾಡುವುದು ನಮ್ಮ ಕರ್ತವ್ಯ, ಆ ನಿಟ್ಟಿನಲ್ಲಿ ರೈತರ ಅಭಿವೃದ್ಧಿಗೆ ಎಪಿಎಂಸಿ ಸದಾ ಶ್ರಮಿಸುತ್ತ ಅವರ ಹಿತ ಬಯಸುತ್ತದೆ.
ಸಿದ್ದು ಬಾನರ್ ಅಧ್ಯಕ್ಷ,
ಎಪಿಎಂಸಿ. ಸೇಡಂ